ಬೆಂಗಳೂರು ವಿವಿ ಪಿಎಚ್‌ಡಿ ಸೀಟುಗಳಿಗೆ ಭಾರೀ ಬೇಡಿಕೆ

Update: 2019-07-14 17:17 GMT

ಬೆಂಗಳೂರು, ಜು.14: ಬೆಂಗಳೂರು ವಿಶ್ವವಿದ್ಯಾಲಯದಲ್ಲಿನ 482 ಪಿಎಚ್‌ಡಿ ಸೀಟುಗಳಿಗೆ ಪ್ರಸಕ್ತ ಸಾಲಿನಲ್ಲಿ ಸುಮಾರು 2,400 ಅರ್ಜಿಗಳು ಸಲ್ಲಿಕೆಯಾಗಿವೆ.

ಕಳೆದ ಮೂರು ವರ್ಷಗಳಿಂದ ಬೆಂಗಳೂರು ವಿವಿಯಲ್ಲಿ ಪಿಎಚ್‌ಡಿಗೆ ಅರ್ಜಿಗಳನ್ನು ಆಹ್ವಾನ ಮಾಡಿರಲಿಲ್ಲ. ಇದೀಗ ಪ್ರಸಕ್ತ ಸಾಲಿನಲ್ಲಿ ಅರ್ಜಿ ಸ್ವೀಕರಿಸಿದ್ದು, ಪ್ರಸಕ್ತ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಶೇ.40 ರಷ್ಟು ವಿಜ್ಞಾನ ವಿಷಯಕ್ಕೆ ಸೇರಿದರೆ, ಎಂಜಿನಿಯರ್, ವಾಣಿಜ್ಯ, ಕಲಾ ವಿಭಾಗಗಳಿಗೆ ಉಳಿದ ಅರ್ಜಿಗಳು ಸಲ್ಲಿಕೆಯಾಗಿವೆ. ಕಲಾ ವಿಭಾಗದಲ್ಲಿ 55, ವಿಜ್ಞಾನ ವಿಭಾಗದಲ್ಲಿ 189, ವಾಣಿಜ್ಯ ವಿಭಾಗಕ್ಕೆ 20 ಹಾಗೂ ಎಂಜಿನಿಯರಿಂಗ್ ವಿಭಾಗಕ್ಕೆ 218 ಸೀಟುಗಳು ಲಭ್ಯವಿದೆ.

ವಿಶ್ವವಿದ್ಯಾಲಯವು 2019 ನೆ ಸಾಲಿನಲ್ಲಿ 37 ವಿಷಯಗಳಿಂದ ಲಭ್ಯವಿದ್ದ 482 ಸೀಟುಗಳಿಗೆ 2,400 ಅರ್ಜಿಗಳು ಬಂದಿವೆ. ವಿವಿಯನ್ನು ಮೂರು ಭಾಗಗಳಾಗಿ ವಿಂಗಡಿಸಿದ ಬಳಿಕವೂ ಮೂಲ ವಿವಿಯ ಬೇಡಿಕೆ ಕುಸಿದಿಲ್ಲ. 2016ರಲ್ಲಿ ಅರ್ಜಿ ಆಹ್ವಾನಿಸಿದ್ದ ಸಂದರ್ಭದಲ್ಲಿ 1,800 ಅರ್ಜಿಗಳು ಬಂದಿದ್ದವು. ಆದರೆ, ಹೊಸ ವಿವಿಯಾದ ಬಳಿಕ ಅರ್ಜಿಗಳ ಸಂಖ್ಯೆ ಅಧಿಕವಾಗಿದೆ ಎಂದು ವಿವಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಹಾಗೂ ವಿವರ: ಪಿಎಚ್‌ಡಿ ಅರ್ಜಿ ಸಲ್ಲಿಕೆಗೆ ಇನ್ನೂ ಸಮಯಕಾಶವಿದ್ದು, ದಂಡ ಶುಲ್ಕದೊಂದಿಗೆ ಜು.18 ರವರೆಗೂ ಅರ್ಜಿ ಸಲ್ಲಿಕೆ ಮಾಡಬಹುದು. ಹಾರ್ಡ್ ಕಾಪಿ ಸಲ್ಲಿಸಲು ಜು.23 ಕೊನೆಯ ದಿನಾಂಕವಾಗಿದ್ದು, ಆ.18 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಆ.23 ರಂದು ಕೀ ಉತ್ತರಗಳ ಪ್ರಕಟ ಮಾಡಲಾಗುತ್ತದೆ. ಸೆ.9 ರವರೆಗೂ ಆಕ್ಷೇಪಣೆಗಳು ಸಲ್ಲಿಸಲು ಅವಕಾಶವಿದ್ದು, ಅ.16 ರಂದು ಕೌನ್ಸೆಲಿಂಗ್ ನಡೆದು, ನ.18 ರಿಂದ ಕೋರ್ಸ್ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News