ಸರಕಾರಕ್ಕೆ ಕೆಲವು ಗಂಟೆಗಳಷ್ಟೇ ಆಯಸ್ಸಿದೆ: ಸಿ.ಟಿ.ರವಿ

Update: 2019-07-14 17:25 GMT

ಬೆಂಗಳೂರು, ಜು.14: ಸರಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿದ್ದು, ಸರಕಾರಕ್ಕೆ ಇನ್ನು ಕೆಲವು ಗಂಟೆಗಳಷ್ಟೇ ಆಯಸ್ಸಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರದ ವಿರುದ್ಧ ಅಸಮಾಧಾನಗೊಂಡು ಶಾಸಕರು ರಾಜೀನಾಮೆ ನೀಡಿದ್ದಾರೆ. ಅವರನ್ನು ಮನವೊಲಿಸಿ ವಾಪಸ್ಸು ಕರೆ ತರುವಲ್ಲಿ ಎರಡೂ ಪಕ್ಷದ ನಾಯಕರಿಗೆ ಸಾಧ್ಯವಾಗಿಲ್ಲ. ಇನ್ನೂ ಯಾವುದೇ ಪ್ರಯತ್ನಗಳು ಫಲ ನೀಡುವುದಿಲ್ಲ. ಹೀಗಾಗಿ, ಸರಕಾರದ ಉಳಿವಿಗೆ ಕ್ಷಣಗಣನೆ ಆರಂಭವಾಗಿದೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಬಹುಮತದ ನಾಟಕದ ಬದಲಿಗೆ ರಾಜೀನಾಮೆ ನೀಡುವ ಮೂಲಕ ಮತ್ತಷ್ಟು ಅಪಮಾನದಿಂದ ಪಾರಾಗುವುದು ಒಳ್ಳೆಯದು. ಇಲ್ಲದಿದ್ದರೆ, ನಾಳೆ ಮತ್ತಷ್ಟು ಮುಜುಗರ ಅನುಭವಿಸಬೇಕಾಗುತ್ತದೆ ಎಂದ ಅವರು,ದೇವೇಗೌಡರು ಮಗನಿಗೆ ರಾಜೀನಾಮೆ ಮಾರ್ಗವನ್ನು ಭೋದಿಸಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಈಗಾಗಲೇ ರಾಜಕೀಯದಲ್ಲಿರುವವರಿಗೆ ತೊಟ್ಟಿಲು ತೂಗುತ್ತಿರುವವರು ಯಾರು? ಚಿವುಟುತ್ತಿರುವವರು ಯಾರು? ಎಂದು ಗೊತ್ತಾಗಿದೆ. ಇಷ್ಟೆಲ್ಲಾ ಆದ ಮೇಲೂ ಅರ್ಥ ಮಾಡಿಕೊಳ್ಳದಿರುವುದಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ ಎಂದ ಅವರು, ನಮ್ಮ ಪಕ್ಷದ ಅಧ್ಯಕ್ಷರೊಂದಿಗೆ ಸಭೆ ನಡೆಸಲಿದ್ದು, ನಾಳೆ ಅನುಸರಿಸಬೇಕಾದ ಕ್ರಮ ಹಾಗೂ ರಾಜಕೀಯ ತಂತ್ರದ ಬಗ್ಗೆ ಚರ್ಚಿಸಲಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News