ಭಾರತಕ್ಕೆ 2 ಚಿನ್ನ ಸಹಿತ 6 ಪದಕ

Update: 2019-07-15 03:21 GMT

ಹೊಸದಿಲ್ಲಿ, ಜು.14: ಜರ್ಮನಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ರೈಫಲ್/ಪಿಸ್ತೂಲ್/ಶಾಟ್‌ಗನ್ ಟೂರ್ನಿಯ ಎರಡನೇ ದಿನವಾದ ರವಿವಾರ ಭಾರತ ಎರಡು ಚಿನ್ನ ಸಹಿತ 6 ಪದಕಗಳನ್ನು ಬಾಚಿಕೊಂಡಿದೆ. ಈ ಮೂಲಕ ಪದಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.

ಭಾರತದ ಶೂಟರ್‌ಗಳು ಟೂರ್ನಿಯಲ್ಲಿ ಈತನಕ ನಾಲ್ಕು ಚಿನ್ನ, ಐದು ಬೆಳ್ಳಿ ಹಾಗೂ ಎರಡು ಕಂಚು ಸಹಿತ ಒಟ್ಟು 11 ಪದಕಗಳನ್ನು ಜಯಿಸಿದ್ದಾರೆ.

 ಪುರುಷರ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಗೌರವ್ ರಾಣಾ ಹಾಗೂ ಅರ್ಜುನ್ ಸಿಂಗ್ ಚೀಮಾ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದರು. ರಾಣಾ 553 ಅಂಕ ಗಳಿಸಿದರೆ, ಚೀಮಾ ಒಟ್ಟು 551 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು.

ಗೌರವ್ ಹಾಗೂ ಅರ್ಜುನ್ ಜೋಡಿ ವಿಜಯವೀರ್ ಸಿಧು(547)ಜೊತೆಗೂಡಿ ಟೀಮ್ ಸ್ಪರ್ಧೆಯಲ್ಲಿ ಒಟ್ಟು 1,651 ಅಂಕ ಗಳಿಸಿ ಚಿನ್ನದ ಪದಕ ಜಯಿಸಿದರು. 1610 ಅಂಕ ಗಳಿಸಿ ಬೆಲಾರಸ್ ಟೀಮ್ ಎರಡನೇ ಸ್ಥಾನ ಪಡೆಯಿತು.

ವಿಜಯವೀರ್ ಟೂರ್ನಿಯಲ್ಲಿ ಎರಡನೇ ಚಿನ್ನ ಜಯಿಸಿದರು. ಮೊದಲ ದಿನವಾದ ಶನಿವಾರ ವಿಜಯವೀರ್ 25 ಮೀ. ಪಿಸ್ತೂಲ್ ಟೀಮ್ ವಿಭಾಗದಲ್ಲಿ ಚಿನ್ನ ಜಯಿಸಿದ್ದರು.

ಮಹಿಳೆಯರ 50 ಮೀ.ಪಿಸ್ತೂಲ್ ಸ್ಪರ್ಧೆಯಲ್ಲಿ ಪ್ರಿಯಾ ರಾಘವ್ 535 ಅಂಕ ಗಳಿಸಿ ಬೆಳ್ಳಿ ಪದಕ ಜಯಿಸಿದರು. ವಿಭೂತಿ ಭಾಟಿಯಾ(531)ಕಂಚಿನ ಪದಕ ಜಯಿಸಿದ್ದಾರೆ.

ಪ್ರಿಯಾ ಹಾಗೂ ವಿಭೂತಿ ಜೋಡಿ ಹರ್ಷದಾ ನಿಥಾವೆ(491)ಜೊತೆಗೂಡಿ 1557 ಅಂಕ ಗಳಿಸಿ ಬೆಳ್ಳಿ ಜಯಿಸಿತು. ರಶ್ಯ ಚಿನ್ನದ ಪದಕ ತನ್ನದಾಗಿಸಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News