ವಿಶ್ವಕಪ್‌ ಜಯಿಸಿದ ಇಂಗ್ಲೆಂಡ್, ಹೃದಯ ಗೆದ್ದ ನ್ಯೂಝಿಲ್ಯಾಂಡ್

Update: 2019-07-15 18:32 GMT

ಲಂಡನ್, ಜು.16:‘ಕ್ರಿಕೆಟ್ ಕಾಶಿ’ಖ್ಯಾತಿಯ ಲಾರ್ಡ್ಸ್‌ಕ್ರೀಡಾಂಗಣದಲ್ಲಿ ರವಿವಾರ ಇಂಗ್ಲೆಂಡ್-ನ್ಯೂಝಿಲ್ಯಾಂಡ್ ನಡುವೆ ನಡೆದ ಐಸಿಸಿ ವಿಶ್ವಕಪ್‌ ಫೈನಲ್ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿತ್ತು. ಇಂಗ್ಲೆಂಡ್ ತಂಡ ಫೈನಲ್ ಪಂದ್ಯದಲ್ಲಿ ತಾನು ಗಳಿಸಿದ್ದ ಗರಿಷ್ಠ ಬೌಂಡರಿಗಳ ಆಧಾರದಲ್ಲಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಇಂಗ್ಲೆಂಡ್ ಒಟ್ಟು 26 ಬೌಂಡರಿ ಬಾರಿಸಿದ್ದರೆ, ನ್ಯೂಝಿಲ್ಯಾಂಡ್ ಒಟ್ಟು 17 ಬೌಂಡರಿ ಗಳಿಸಿತ್ತು. ಕೊನೆಯ ತನಕ ವೀರೋಚಿತ ಹೋರಾಟ ನೀಡಿದ ನ್ಯೂಝಿಲ್ಯಾಂಡ್ ಶಿಸ್ತುಬದ್ಧವಾಗಿ ಆಡಿ ಎಲ್ಲರ ಹೃದಯ ಗೆಲ್ಲಲು ಯಶಸ್ವಿಯಾಯಿತು.

ಉಭಯ ತಂಡಗಳು 50 ಓವರ್ ಆಡಿದ ಬಳಿಕ ಪಂದ್ಯ ಟೈನಲ್ಲಿ ಕೊನೆಗೊಂಡಿತು. ನ್ಯೂಝಿಲ್ಯಾಂಡ್ 8ಕ್ಕೆ 241 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 241 ರನ್ ಗಳಿಸಿತು. ಆಗ ವಿಶ್ವಕಪ್‌ನಲ್ಲಿ ಮೊದಲ ಬಾರಿ ಸೂಪರ್ ಓವರ್ ಅಳವಡಿಸಲಾಯಿತು. ಉಭಯತಂಡಗಳು ತಲಾ 15 ರನ್ ಗಳಿಸಿದ್ದ ಕಾರಣ ಸೂಪರ್ ಓವರ್ ಕೂಡ ಟೈ ಗೊಂಡಿತು. ಆಗ ಗರಿಷ್ಠ ಬೌಂಡರಿ ಗಳಿಸಿದ ತಂಡಕ್ಕೆ ಟ್ರೋಫಿ ನೀಡಲು ನಿರ್ಧರಿಸಲಾಯಿತು.

ವಿಶ್ವಕಪ್‌ ಹೆಲೆಟ್ಸ್

► ಆತಿಥೇಯ ಇಂಗ್ಲೆಂಡ್ ತಂಡ ನಾಟಕೀಯ ತಿರುವಿನಲ್ಲಿ ಮೊತ್ತ ಮೊದಲ ಬಾರಿ ವಿಶ್ವಕಪ್‌ನ್ನು ಜಯಿಸಿತು. ತನ್ನ ನಾಲ್ಕನೇ ಪ್ರಯತ್ನದಲ್ಲಿ ವಿಶ್ವಕಪ್ ಮುಡಿಗೇರಿಸಿಕೊಂಡಿತು. ಮತ್ತೊಂದೆಡೆ ನ್ಯೂಝಿಲ್ಯಾಂಡ್ ಸತತ 2ನೇ ಬಾರಿ ಫೈನಲ್‌ನಲ್ಲಿ ಎಡವಿ ಪ್ರಶಸ್ತಿ ವಂಚಿತವಾಯಿತು.

► ನ್ಯೂಝಿಲ್ಯಾಂಡ್ ತಂಡ ಶ್ರೀಲಂಕಾ(2007,2011) ಹಾಗೂ ಇಂಗ್ಲೆಂಡ್(1987, 1992)ಬಳಿಕ ಸತತ ಎರಡು ಬಾರಿ ವಿಶ್ವಕಪ್ ವಂಚಿತವಾದ ಮೂರನೇ ತಂಡವಾಗಿದೆ.

► ಇಂಗ್ಲೆಂಡ್ ತಂಡ ಕ್ರಿಕೆಟ್ ವಿಶ್ವಕಪ್‌ನ ಲೀಗ್ ಹಂತದಲ್ಲಿ ನ್ಯೂಝಿಲ್ಯಾಂಡ್‌ನ್ನು 119 ರನ್ ಗಳಿಂದ ಮಣಿಸಿ ವಿಶ್ವಕಪ್‌ನಲ್ಲಿ ಸತತ 5 ಸೋಲುಗಳಿಂದ ಹೊರ ಬಂದಿತ್ತು. ಇದೀಗ ಸತತ ಎರಡನೇ ಬಾರಿ ಗೆಲುವು ದಾಖಲಿಸಿದೆ.

► ಜಾನಿ ಬೈರ್‌ಸ್ಟೋವ್ ನ್ಯೂಝಿಲ್ಯಾಂಡ್ ವಿರುದ್ಧ ಆಡಿರುವ 8 ಏಕದಿನ ಪಂದ್ಯಗಳಲ್ಲಿ ಒಟ್ಟು 527 ರನ್ ಗಳಿಸಿದೆ.

► ಇಂಗ್ಲೆಂಡ್ ವಿರುದ್ಧ ಫೈನಲ್‌ನಲ್ಲಿ 30 ರನ್ ಗಳಿಸಿ ಔಟಾದ ಕೇನ್ ವಿಲಿಯಮ್ಸನ್ ವಿಶ್ವಕಪ್ ಟೂರ್ನಿಯೊಂದರಲ್ಲಿ ಗರಿಷ್ಟ ರನ್‌ಗಳನ್ನು ಕಲೆ ಹಾಕಿ ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ(548)ದಾಖಲೆಯನ್ನು ಮುರಿದರು.

► ರಾಸ್ ಟೇಲರ್ ವಿಶ್ವಕಪ್‌ನಲ್ಲಿ ಆಡಿರುವ 33 ಪಂದ್ಯಗಳಲ್ಲಿ 1,002 ರನ್ ಗಳಿಸಿದರು. ಸ್ಟೀಫನ್ ಫ್ಲೆಮಿಂಗ್(1,075, 33 ಪಂದ್ಯಗಳು)ಬಳಿಕ ಈ ಸಾಧನೆ ಮಾಡಿದ ನ್ಯೂಝಿಲ್ಯಾಂಡ್‌ನ 2ನೇ ಬ್ಯಾಟ್ಸ್ ಮ್ ಟೇಲರ್.

► ಇಂಗ್ಲೆಂಡ್ ತಂಡ ಫೈನಲ್‌ನಲ್ಲಿ ಎರಡು ಬಾರಿ ಭಾರೀ ಲಾಭ ಗಳಿಸಿತು. ಟ್ರೆಂಟ್ ಬೌಲ್ಟ್ ಅವರು ಸ್ಟೋಕ್ಸ್ ಕ್ಯಾಚ್ ಪಡೆದರೂ, ಬೌಂಡರಿ ಗೆರೆ ದಾಟಿದ ಕಾರಣ ಇಂಗ್ಲೆಂಡ್ ಖಾತೆಗೆ 6 ರನ್ ಸೇರಿತು. ಇಂಗ್ಲೆಂಡ್‌ಗೆ 3 ಎಸೆತಗಳಲ್ಲಿ 9 ರನ್ ಅಗತ್ಯವಿದ್ದಾಗ ಮಾರ್ಟಿನ್ ಗಪ್ಟಿಲ್ ಅವರ ಥ್ರೋ 2ನೇ ರನ್ ಗಳಿಸಲು ಯತ್ನಿಸುತ್ತಿದ್ದ ಸ್ಟೋಕ್ಸ್ ಅವರ ಬ್ಯಾಟ್‌ಗೆ ತಗಲಿ ಬೌಂಡರಿ ಗೆರೆ ದಾಟಿತು. ಆಗ ಇಂಗ್ಲೆಂಡ್‌ಗೆ 6 ರನ್ ಲಭಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News