ವಿಲಿಯಮ್ಸನ್‌ಗೆ ಕ್ಷಮೆ ಕೇಳುವೆ: ಸ್ಟೋಕ್ಸ್

Update: 2019-07-15 18:41 GMT

 ಲಂಡನ್, ಜು.16: ವಿಶ್ವಕಪ್ ಫೈನಲ್ ಪಂದ್ಯದ ಕೊನೆಯ ಓವರ್‌ನಲ್ಲಿ ನಡೆದ ಘಟನೆಯ ಕುರಿತಂತೆ ನ್ಯೂಝಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಬಳಿ ಕ್ಷಮೆಯಾಚಿಸುವೆ ಎಂದು ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹೇಳಿದ್ದಾರೆ. ‘‘ವಿಶ್ವ ಚಾಂಪಿಯನ್ ಆಗಿರುವ ಈ ಕ್ಷಣ ಅದ್ಭುತ. ಇದನ್ನು ಬಣ್ಣಿಸಲು ಪದಗಳಿಲ್ಲ. ಇಲ್ಲಿ ನಮ್ಮ ಎಲ್ಲರ ಪರಿಶ್ರಮವಿದೆ. ನ್ಯೂಝಿಲ್ಯಾಂಡ್ ವಿರುದ್ಧ ಆಡುವುದು ಯಾವಾಗಲೂ ಖುಷಿಯ ವಿಚಾರ. ಅವರೆಲ್ಲರೂ ಉತ್ತಮ ಆಟಗಾರರು. ಅಂತಿಮ ಓವರ್‌ನಲ್ಲಿ ನಡೆದ ಆ ಘಟನೆಯ ಬಗ್ಗೆ ನಾನು ಕೇನ್ ಬಳಿ ಕ್ಷಮೆ ಕೋರುವೆ’’ ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತ ಸ್ಟೋಕ್ಸ್ ಹೇಳಿದರು.

ಟ್ರೆಂಟ್ ಬೌಲ್ಟ್ ಎಸೆದಿದ್ದ ಅಂತಿಮ ಓವರ್‌ನ 4ನೇ ಎಸೆತವನ್ನು ಸ್ಟೋಕ್ಸ್ ಮಿಡ್-ವಿಕೆಟ್‌ನತ್ತ ತಳ್ಳಿ ಎರಡು ರನ್ ಗಳಿಸಲು ಮುಂದಾದರು.ಎರಡನೇ ರನ್ ಗಳಿಸುವ ಯತ್ನದಲ್ಲಿದ್ದಾಗ ಮಾರ್ಟಿನ್ ಗಪ್ಟಿಲ್ ಎಸೆದ ಚೆಂಡು ಸ್ಟೋಕ್ಸ್ ಬ್ಯಾಟ್‌ಗೆ ತಗಲಿ, ಬೌಂಡರಿ ಗೆರೆ ದಾಟಿತು. ಆಗ ತಕ್ಷಣವೇ ಸ್ಟೋಕ್ಸ್ ಎರಡೂ ಕೈ ಮೇಲೆತ್ತಿ ಕ್ಷಮೆ ಕೋರಿದ್ದರು. ಹೆಚ್ಚುವರಿ 4 ರನ್‌ನಿಂದ ಇಂಗ್ಲೆಂಡ್‌ಗೆ ಲಾಭವಾಗಿದ್ದರೆ, ಕಿವೀಸ್‌ಗೆ ನಷ್ಟವಾಗಿತ್ತು.

ಸ್ಟೋಕ್ಸ್ ಇಂಗ್ಲೆಂಡ್ ರನ್ ಚೇಸಿಂಗ್ ವೇಳೆ ಔಟಾಗದೆ 84 ರನ್ ಗಳಿಸಿದ್ದರು. ಪಂದ್ಯ ಟೈ ಆಗಿ ಸೂಪರ್ ಓವರ್‌ಗೆ ವಿಸ್ತರಣೆಯಾದಾಗ ಸೂಪರ್ ಓವರ್‌ನಲ್ಲಿ 3 ಎಸೆತಗಳಲ್ಲಿ ಔಟಾಗದೆ 8 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News