ಫುಟ್ಬಾಲ್‌ನಲ್ಲಿ ಕಳೆದುಕೊಂಡ ವಿಶ್ವಕಪ್ ಕ್ರಿಕೆಟ್‌ನಲ್ಲಿ ದೊರೆಯಿತು

Update: 2019-07-15 18:45 GMT

ಲಂಡನ್, ಜು.16: ಅರ್ಜೆಂಟೀನ ತಂಡ 1986ರಲ್ಲಿ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಫುಟ್ಬಾಲ್ ದಂತಕತೆ ಡಿಯಾಗೊ ಮರಡೋನಾ ಬಾರಿಸಿದ ಗೋಲು ನೆರವಿನಿಂದ ಇಂಗ್ಲೆಂಡ್‌ನ ವಿಶ್ವಕಪ್ ಗೆಲ್ಲುವ ಅವಕಾಶವನ್ನು ಕಿತ್ತುಕೊಂಡಿತ್ತು. ಅರ್ಜೆಂಟೀನ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಅದೇ ಇಂಗ್ಲೆಂಡ್‌ಗೆ ಬೆನ್‌ಸ್ಟೋಕ್ಸ್ ಕ್ರಿಕೆಟ್‌ನಲ್ಲಿ ಇದೀಗ ವಿಶ್ವಕಪ್ ತಂದುಕೊಟ್ಟಿದ್ದಾರೆ. ಸೋಲಿನ ದವಡೆಗೆ ಸಿಲುಕಿದ್ದಾಗ ಸ್ಟೋಕ್ಸ್ ಬ್ಯಾಟ್‌ಗೆ ತಗಲಿ ಚೆಂಡು ಬೌಂಡರಿ ಸೇರಿದ್ದು, ಇಂಗ್ಲೆಂಡ್‌ನ ಗೆಲುವನ್ನು ಸುಲಭಗೊಳಿಸಿತು. ಸ್ಟೋಕ್ಸ್ ಆಕರ್ಷಕ 84 ರನ್ ಸಿಡಿಸಿದರು. ಇದರ ನೆರವಿನಲ್ಲಿ ಇಂಗ್ಲೆಂಡ್ ಟೈ ಸಾಧಿಸಿತು. ಸೂಪರ್ ಓವರ್‌ನಲ್ಲೂ ಉಭಯ ತಂಡಗಳಿಗೂ ಗೆಲುವು ದೊರೆಯದೆ ಸೂಪರ್ ಓವರ್ ಟೈನಲ್ಲಿ ಕೊನೆಗೊಂಡಿತು. ಗರಿಷ್ಠ ಬೌಂಡರಿ ಬಾರಿಸಿರುವುದು ಇಂಗ್ಲೆಂಡ್‌ನ ನೆರವಿಗೆ ಬಂತು. ಈ ಆಧಾರದಲ್ಲಿ ಇಂಗ್ಲೆಂಡ್‌ನ್ನು ವಿಜಯಿ ತಂಡವೆಂದು ಘೋಷಿಸಲಾಯಿತು.

 ಗೆಲುವಿಗೆ 242 ರನ್‌ಗಳ ಸವಾಲನ್ನು ಪಡೆದ ಇಂಗ್ಲೆಂಡ್ ಕೊನೆಯ ಓವರ್‌ನಲ್ಲಿ 15 ರನ್‌ಗಳನ್ನು ಗಳಿಸಬೇಕಿತ್ತು. ನ್ಯೂಝಿಲ್ಯಾಂಡ್‌ನ ಟ್ರೆಂಟ್ ಬೌಲ್ಟ್ ಮೊದಲ ಎರಡು ಎಸೆತಗಳಲ್ಲಿ ರನ್ ನೀಡಲಿಲ್ಲ. ಮೂರನೇ ಎಸೆತದಲ್ಲಿ ಬೆನ್ ಸ್ಟೋಕ್ಸ್ ಸಿಕ್ಸರ್ ಬಾರಿಸಿದರು. 4ನೇ ಎಸೆತದಲ್ಲಿ ಸ್ಟೋಕ್ಸ್ 2 ರನ್ ಪೂರೈಸುತ್ತಿದ್ದಾಗ ಫೀಲ್ಡರ್ ಚೆಂಡನ್ನು ತಡೆದು ಸ್ಟಂಪ್‌ನತ್ತ ಎಸೆದಾಗ ಚೆಂಡು ಬ್ಯಾಟ್‌ಗೆ ತಗಲಿ ಬೌಂಡರಿ ಗೆರೆ ದಾಟುವುದರೊಂದಿಗೆ ಇಂಗ್ಲೆಂಡ್ ಖಾತೆಗೆ 2 ರನ್ ಜೊತೆಗೆ ಹೆಚ್ಚುವರಿ 4 ರನ್ ಸಿಕ್ಕಿತು. ಕೊನೆಯ ಎರಡು ಎಸೆತಗಳಲ್ಲಿ ಸ್ಟೋಕ್ಸ್ ಜೊತೆ ಆದಿಲ್ ರಶೀದ್ ಮತ್ತು ಮಾರ್ಕ್‌ವುಡ್ ಅವರು ತಲಾ 2 ರನ್‌ಗಳನ್ನು ಕದಿಯಲು ಹೋಗಿ ರನೌಟಾದರು. ಇದರಿಂದಾಗಿ ಪಂದ್ಯ ಟೈನಲ್ಲಿ ಕೊನೆಗೊಂಡಿತು. ಸೂಪರ್ ಓವರ್‌ನಲ್ಲಿ ಇಂಗ್ಲೆಂಡ್ 15 ರನ್ ದಾಖಲಿಸಿತು. ಅಷ್ಟೇ ರನ್‌ಗಳನ್ನು ನ್ಯೂಝಿಲ್ಯಾಂಡ್ ತಂಡ ದಾಖಲಿಸಿದ ಕಾರಣದಿಂದಾಗಿ ಸೂಪರ್ ಓವರ್ ಟೈ ಆಗಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿತು. ನ್ಯೂಝಿಲ್ಯಾಂಡ್ ಚೆನ್ನಾಗಿ ಪ್ರದರ್ಶನ ನೀಡಿದ್ದರೂ ಇಂಗ್ಲೆಂಡ್‌ನಷ್ಟು ಬೌಂಡರಿ ಮತ್ತು ಸಿಕ್ಸರ್ ಬಾರಿಸಲಿಲ್ಲ. ಈ ಕಾರಣದಿಂದಾಗಿ ನ್ಯೂಝಿಲ್ಯಾಂಡ್ ತಂಡಕ್ಕೆ ಚಾಂಪಿಯನ್ ಪಟ್ಟ ಕೈ ತಪ್ಪಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News