ತಮ್ಮ ಜೀವಮಾನದ ಉಳಿತಾಯ ಮೊತ್ತ ರೂ. 1.08 ಕೋಟಿ ರಕ್ಷಣಾ ಸಚಿವಾಲಯಕ್ಕೆ ದೇಣಿಗೆ ನೀಡಿದ ಮಾಜಿ ವಾಯು ಸೇನಾ ಯೋಧ

Update: 2019-07-16 11:07 GMT
ಸಿ ಬಿ ಆರ್ ಪ್ರಸಾದ್ (Photo: ANI)

ಹೊಸದಿಲ್ಲಿ: ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿದ್ದ 74 ವರ್ಷದ ಸಿ ಬಿ ಆರ್ ಪ್ರಸಾದ್ ತಮ್ಮ ಜೀವಮಾನದ ಉಳಿತಾಯ ಮೊತ್ತವಾದ ರೂ. 1.08 ಕೋಟಿಯಷ್ಟು ಹಣವನ್ನು ತಾವು ವಾಯು ಸೇನೆಯ ಉದ್ಯೋಗವನ್ನು ತೊರೆದು 40 ವರ್ಷಗಳಾದ ನಂತರ ರಕ್ಷಣಾ ಸಚಿವಾಲಯಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಸೋಮವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಅವರು ಈ ದೇಣಿಗೆ ಮೊತ್ತವನ್ನು ಹಸ್ತಾಂತರಿಸಿದ್ದಾರೆ.

ಸುಮಾರು ಒಂಬತ್ತು ವರ್ಷ ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಪ್ರಸಾದ್ ನಂತರ ರೈಲ್ವೆಯಲ್ಲಿ ಉತ್ತಮ ವೇತನದ ಆಫರ್ ಇದೆಯಿಂದು ವಾಯು ಸೇನೆಯ ಸೇವೆ ತೊರೆದಿದ್ದರು. ಆದರೆ ದುರದೃಷ್ಟವಶಾತ್ ಅವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಲಭಿಸದೆ ನಂತರ ಅವರು ಜೀವನ ನಿರ್ವಹಿಸಲು ಹೈನುಗಾರಿಕೆಯನ್ನು ಆರಂಭಿಸಿದ್ದರು.

ಹೈನುಗಾರಿಕೆಯಲ್ಲಿ 30 ವರ್ಷ ತಮ್ಮನ್ನು ತೊಡಗಿಸಿಕೊಂಡು ಅದರಲ್ಲಿ ಯಶಸ್ಸನ್ನೂ ಕಂಡ ಅವರು ಕ್ರೀಡಾ ವಿಶ್ವವಿದ್ಯಾಲಯವನ್ನೂ ಸ್ಥಾಪಿಸಿದ್ದಾರೆ.

ತಮ್ಮ ಕುಟುಂಬಕ್ಕೆ ತಾವು ನಿರ್ವಹಿಸಬೇಕಾದ ಕರ್ತವ್ಯ ಹಾಗೂ ಜವಾಬ್ದಾರಿಯೆಲ್ಲವನ್ನೂ ನಿಭಾಯಿಸಿದ ನಂತರ ರಕ್ಷಣಾ ಸಚಿವಾಲಯಕ್ಕೆ ಏನಾದರೂ ನೀಡಬೇಕೆಂಬ ಮನಸ್ಸಿನಿಂದ ಅವರು ರೂ 1.08 ಕೋಟಿ ದೇಣಿಗೆ ನೀಡಿದ್ದಾರೆ.

ಅವರ ಕುಟುಂಬ ಅವರ ಈ ನಿರ್ಧಾರಕ್ಕೆ ಸಹಮತ ಹೊಂದಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ತಮ್ಮ ಸಂಪತ್ತಿನ ಶೇ 2ರಷ್ಟನ್ನು ಪುತ್ರಿಗೆ ಹಾಗೂ ಶೇ 1ರಷ್ಟು ಪತ್ನಿಗೆ ಹಾಗೂ ಉಳಿದ ಶೇ 97ರಷ್ಟನ್ನು ಸಮಾಜಕ್ಕೆ ವಾಪಸ್ ನೀಡಿದ್ದಾಗಿ ಉತ್ತರಿಸುತ್ತಾರೆ.

ಅವರು ಇಂತಹ ಒಂದು ನಿರ್ಧಾರ ಕೈಗೊಳ್ಳಲು ಒಂದು ಕಾರಣವೂ ಇದೆ. "ನಾನು 20 ವರ್ಷದವನಾಗಿದ್ದಾಗ ವಾಯು ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗ ನಡೆದ ಕಾರ್ಯಕ್ರಮದಲ್ಲಿ ಕೊಯಮತ್ತೂರಿನ  ಜಿ ಡಿ ನಾಯ್ಡು ಎಂಬವರು ತಮ್ಮ ಭಾಷಣದಲ್ಲಿ  'ಕುಟುಂಬದೆಡೆಗೆ ನಮ್ಮ ಕರ್ತವ್ಯ ಮುಗಿದಾಗ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ನಮ್ಮ ಋಷಿಮುನಿಗಳು ಹೇಳಿದ್ದರಿಂದ ಭಾರತ ಒಂದು ಮಹಾನ್ ದೇಶವಾಗಿದೆ' ಎಂದಿದ್ದರು,  ಇದು ನನ್ನ ಮೇಲೆ ಪ್ರಭಾವ ಬೀರಿದೆ,'' ಎಂದಿದ್ದಾರೆ.

"ನನ್ನ ಕಿಸೆಯಲ್ಲಿ ಕೇವಲ ರೂ. 5 ಹಿಡಿದುಕೊಂಡು ನಾನು ಶ್ರಮ ಪಟ್ಟು 500 ಎಕರೆ ಭೂಮಿ ನನ್ನದಾಗಿಸಿದೆ. ನನ್ನ ಪತ್ನಿಗೆ 5 ಎಕರೆ ಹಾಗೂ ಪುತ್ರಿಗೆ 10 ಎಕರೆ ನೀಡಿದ್ದು ಉಳಿದಿದ್ದನ್ನು ಸಮಾಜಕ್ಕೆ ನೀಡಿದ್ದೇನೆ,'' ಎಂದಿದ್ದಾರೆ.

ಚಿಕ್ಕಂದಿನಲ್ಲಿ ಒಲಿಂಪಿಕ್ ಪದಕ ಪಡೆಯಬೇಕೆಂಬ ಅವರ ಕನಸು ನನಸಾಗದೇ ಇದ್ದರೂ ಇತರರ ಕನಸು ನನಸಾಗಲೆಂದು 50 ಎಕರೆ ಜಮೀನಿನಲ್ಲಿ ಅವರು ಕ್ರೀಡಾ ವಿವಿ ಸ್ಥಾಪಿಸಿದ್ದಾರೆ, ಹುಡುಗರಿಗೆ ಹಾಗೂ ಹುಡುಗಿಯರಿಗೆ ಪ್ರತ್ಯೇಕ ಎರಡು ಕ್ರೀಡಾ ವಿವಿ ಹೊಂದುವುದು ಅವರ ಯೋಜನೆಯಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News