ಸಿಎಂ ರಾಜೀನಾಮೆಗೆ ಪಟ್ಟು: 2ನೆ ದಿನವೂ ಪರಿಷತ್ ಕಲಾಪ ಬಲಿ

Update: 2019-07-16 14:53 GMT

ಬೆಂಗಳೂರು, ಜು.16: ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷದ ಸದಸ್ಯರೆಲ್ಲರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಮಂಗಳವಾರವೂ ಸದನದ ಬಾವಿಗೆ ಇಳಿದು ಧರಣಿ ಮುಂದುವರಿಸಿದ್ದರಿಂದ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು. 

ಮಂಗಳವಾರ ಕಲಾಪ ಆರಂಭವಾಗುತ್ತಿದ್ದಂತೆ ಬಾವಿಗಿಳಿದ ಪ್ರತಿಪಕ್ಷದ ಸದಸ್ಯರೆಲ್ಲರೂ, ಬಹುಮತ ಇಲ್ಲದವರಿಗೆ ಆಡಳಿತ ನಡೆಸಲು ಅವಕಾಶವೇ ಇಲ್ಲ. ಬಹುಮತ ಕಳೆದುಕೊಂಡ ಮುಖ್ಯಮಂತ್ರಿಗಳು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಧರಣಿಗೆ ಮುಂದಾದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಮತ್ತು ಸಚಿವರು, ನಾವೆಲ್ಲರೂ ಸರಕಾರದ ಭಾಗವೇ. ನಾವೇ ಸರಕಾರ ಎಂದು ತಿರುಗೇಟು ನೀಡಿದರು. ಆರೋಪ-ಪ್ರತ್ಯಾರೋಪ ತೀವ್ರಗೊಂಡಿದ್ದರಿಂದ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

ಕಲಾಪ ಶುರುವಾಗುತ್ತಿದ್ದಂತೆ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಫಲಕಗಳನ್ನು ಹಿಡಿದು ಪ್ರತಿಪಕ್ಷದ ಸದಸ್ಯರು ಬಾವಿಗಿಳಿದರು. ಆಗ ಉಪ ಸಭಾಪತಿಗಳು ಬಾವಿಯಿಂದ ಹೊರಬನ್ನಿ ಮಾತನಾಡಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು. ಆದರೆ ಪಟ್ಟುಸಡಿಲಿಸದ ಬಿಜೆಪಿ ಸದಸ್ಯರು, ಕೊಡಿ ಕೊಡಿ ರಾಜೀನಾಮೆ ಕೊಡಿ ಎಂದು ಘೋಷಣೆ ಕೂಗಿದರು. ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು, ನಿಲ್ಲಿಸಿ ನಿಲ್ಲಿಸಿ ಕುದುರೆ ವ್ಯಾಪಾರ ನಿಲ್ಲಿಸಿ ಎಂದು ತಿರುಗೇಟು ನೀಡಿದರು. ಈ ಮಧ್ಯೆ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಚಿವರೆಲ್ಲರೂ ತಮ್ಮದೆ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿಗಳು ವಿಶ್ವಾಸ ಮತಯಾಚನೆಗೆ ಮುಂದಾಗಿದ್ದಾರೆ. ಮತ್ತೊಂದೆಡೆ ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ, ಸರಕಾರಕ್ಕೆ ಅಸ್ತಿತ್ವವೇ ಇಲ್ಲ ಎಂದು ಆರೋಪಿಸಿದರು. ಇದಕ್ಕೆ ಬಿಜೆಪಿ ಇತರ ಸದಸ್ಯರೂ ದನಿಗೂಡಿಸಿದರು. 

ಈ ಸಂದರ್ಭದಲ್ಲಿ ಎದ್ದುನಿಂತ ಸಚಿವ ಡಿ.ಕೆ. ಶಿವಕುಮಾರ್, ನಾನೇ ಸರಕಾರ. ಇಲ್ಲಿಯೇ ಇದೆ ಸರಕಾರ ಎಂದು ತಮ್ಮ ಸಾಲಿನಲ್ಲಿ ಕುಳಿತ ಸಚಿವರನ್ನು ತೋರಿಸಿದರು. ವಿಧಾನ ಪರಿಷತ್ ಸಭಾ ನಾಯಕಿ ಹಾಗೂ ಸಚಿವೆ ಜಯಮಾಲಾ ಮಾತನಾಡಿ, ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಸಚಿವ ಸಾ.ರಾ. ಮಹೇಶ್ ಅವರು ಮಾತನಾಡಿ, ಗುರುವಾರ ವಿಶ್ವಾಸ ಮತಯಾಚನೆಗೆ ದಿನ ನಿಗದಿಯಾಗಿದೆ. ಆದರೂ ಈಗಲೇ ಸಿಎಂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿಯುವುದು ಸರಿಯಲ್ಲ. ಅಲ್ಲದೆ, ವಿಶ್ವಾಸ ಮತಯಾಚನೆಯನ್ನು ಬೀದಿ ಬದಿಯಲ್ಲಿ ಯಾಚಿಸಲು ಬರುವುದಿಲ್ಲ ಎಂದು ತಿರುಗೇಟು ನೀಡಿದರು. ಮಧ್ಯಪ್ರವೇಶಿಸಿದ ಉಪ ಸಭಾಪತಿಗಳು 15 ನಿಮಿಷಗಳ ಕಾಲ ಕಲಾಪ ಮುಂದೂಡಿದರು. ಪುನರಾರಂಭವಾಗುತ್ತಿದ್ದಂತೆ ಮತ್ತೆ ಆರೋಪ-ಪ್ರತ್ಯಾರೋಪಗಳು ಮತ್ತೆ ಶುರುವಾದವು. ಇವುಗಳ ನಡುವೆಯೇ ಪ್ರಶ್ನೋತ್ತರ ಮಂಡನೆ ಆಯಿತು. ಬಳಿಕ ಸಭೆಯನ್ನು ಜುಲೈ 18ಕ್ಕೆ ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News