ಹಡಪದ ಅಪ್ಪಣ್ಣ ಹೆಸರಿನಲ್ಲಿಯೇ ನಿಗಮ ಮಂಡಳಿ ಸ್ಥಾಪಿಸಿ: ಅಪ್ಪಣ್ಣ ಸ್ವಾಮೀಜಿ

Update: 2019-07-16 14:58 GMT

ಬೆಂಗಳೂರು, ಜು.16: ರಾಜ್ಯ ಸರಕಾರವು ಕ್ಷೌರಿಕ ನಿಗಮ ಮಂಡಳಿ ಸ್ಥಾಪಿಸಿದರೆ ಸ್ವಾಗತಾರ್ಹ. ಆದರೆ, ಹಡಪದ ಸಮುದಾಯದ ಅಭಿವೃದ್ಧಿಗಾಗಿ ಹಡಪದ ಅಭಿವೃದ್ಧಿ ಮಂಡಳಿಯನ್ನೂ ಸ್ಥಾಪಿಸಬೇಕೆಂದು ತಂಗಡಗಿ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಆಗ್ರಹಿಸಿದ್ದಾರೆ.

ಮಂಗಳವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷೌರಿಕ ಸಮುದಾಯದ ಅಭಿವೃದ್ಧಿಗಾಗಿ ಸರಕಾರ ಕ್ಷೌರಿಕ ಮಂಡಳಿ ಸ್ಥಾಪನೆ ಮಾಡುವದಾದರೆ ನಮ್ಮದೇನು ಅಡ್ಡಿಯಿಲ್ಲ. ಇದೇ ವೇಳೆ ಹಡಪದ ಸಮುದಾಯ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಮಂಡಳಿ ಅವಶ್ಯಕತೆ ಇದೆ. ಆದುದರಿಂದಾಗಿ, ಹಡಪದ ಅಪ್ಪಣ್ಣ ಹೆಸರಿನಲ್ಲಿಯೇ ನಿಗಮ ಮಂಡಳಿ ಸ್ಥಾಪಿಸಿ, ಅಭಿವೃದ್ಧಿ ಕಾರ್ಯಕ್ರಮ ರೂಪಿಸಬೇಕು. ಇಲ್ಲದಿದ್ದರೆ, ಸಮಾಜದ ಮುಖಂಡರ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಗಜ್ಯೋತಿ ಬಸವಣ್ಣನವರ ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಅಪ್ಪಣ್ಣನವರು ಸಲಹೆಗಾರರಾಗಿದ್ದರು. ಬಸವಣ್ಣನವರನ್ನು ಭೇಟಿ ಮಾಡಲು ಬರುವವರು ಅಪ್ಪಣ್ಣನವರ ಅನುಮತಿ ಪಡೆಯಬೇಕಿತ್ತು. ಬಸವಣ್ಣವರೊಂದಿಗೆ ಹಡಪದ ಅಪ್ಪಣ್ಣನವರು ಉತ್ತಮ ಬಾಂಧವ್ಯ ಹೊಂದಿದ್ದರು. ಹೀಗಾಗಿ, ಅವರು ಎರಡನೆ ಬಸವಣ್ಣನಾಗಿದ್ದಾರೆ ಎಂದು ನುಡಿದರು.

ಜಮಖಂಡಿಯ ಬಸವ ಆಶ್ರಮದ ಶರಣ ಈಶ್ವರ್ ಮಂಟೂರ ಮಾತನಾಡಿ, ಶಿವಶರಣ ಹಡಪದ ಅಪ್ಪಣ್ಣನವರು ಅನುಭವ ಮಂಟಪದ ಮಹಾನ್ ಚೇತನರಾಗಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಸಮರ್ಪಣಾ ಭಾವದಿಂದ ಸಲ್ಲಿಸಿದ ಸೇವೆ ಅವರ್ಣನೀಯ. ಅನುಭವ ಮಂಟಪ ಹಾಗೂ ಬಸವಣ್ಣನವರ ಕಾಯಕಕ್ಕೆ ಹಡಪದ ಅಪ್ಪಣ್ಣನವರು ಆಧಾರ ಸ್ತಂಭರಾಗಿದ್ದರು ಎಂದು ತಿಳಿಸಿದರು.

ಬಸವಣ್ಣನವರ ಕಾರ್ಯಭಾರದಲ್ಲಿ ತಮ್ಮದೇ ಆದ ಸೇವೆಯ ಮೂಲಕ ಹಡಪದ ಅಪ್ಪಣ್ಣನವರು ಪ್ರಸಿದ್ಧರಾಗಿದ್ದರು. ತಾತ್ವಿಕ ಚಿಂತನೆ ಒಳಗೊಂಡ ವಚನಗಳನ್ನು ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಬಸವಣ್ಣ ಲಿಂಗೈಕ್ಯರಾಗುವವರೆಗೂ ಜತೆಗಿದ್ದವರು ಹಡಪದ ಅಪ್ಪಣ್ಣ. ಅವರಿದ್ದ 12 ನೆ ಶತಮಾನವು ಸುವರ್ಣ ಕಾಲವೆಂದು ಇತಿಹಾಸ ದಾಖಲಿಸಿದೆ. ಎಲ್ಲದಕ್ಕಿಂತ ಕಾಯಕವೇ ದೊಡ್ಡದು, ಅದೇ ಶ್ರೇಷ್ಠವಾದುದು ಎಂದು ಪ್ರತಿಪಾದಿಸಿದವರು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಮಾತನಾಡಿ, 12ನೇ ಶತಮಾನದಲ್ಲಿ ವಚನ ಸಾಹಿತ್ಯ ಹಾಗೂ ಕಾಯಕ, ಶ್ರಮ ಸಂಸ್ಕೃತಿಯಲ್ಲಿ ತನ್ನದೇ ಆದ ಇತಿಹಾಸ ಸೃಷ್ಟಿಸಿದ, ಹಡಪದ ಅಪ್ಪಣ್ಣ ಎಲ್ಲರಿಗೂ ಆದರ್ಶ ಪುರುಷ. ಹಡಪದ ಸಮುದಾಯ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಸದೃಢವಾಗಬೇಕಿದೆ. ಆ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಶ್ರಮಿಸಬೇಕು. ಯಾವುದೇ ಉದ್ಯೋಗ ಕೀಳು ಮಟ್ಟದ್ದಲ್ಲ. ಪ್ರತಿಯೊಂದು ವೃತ್ತಿಗೂ ಅದರದ್ದೆ ಆದ ಬೆಲೆ ಇದೆ. ಎಲ್ಲ ವೃತ್ತಿಗಳೂ ಸೇರಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಸಲಹೆ ನೀಡಿದರು. ಸಮಾರಂಭಕ್ಕೂ ಮೊದಲು ಇಲ್ಲಿನ ಪುರಭವನದಿಂದ ರವೀಂದ್ರ ಕಲಾಕ್ಷೇತ್ರದವರೆಗೂ ವಿವಿಧ ಜಾನಪದ ಕಲಾ ತಂಡಗಳಿಂದ ಸಾಂಸ್ಕೃತಿಕ ಜಾಥ ನಡೆಸಲಾಯಿತು.

ಗಣ್ಯರ ಗೈರು: ತೀವ್ರ ಆಕ್ಷೇಪ

ಹಡಪದ ಅಪ್ಪಣ್ಣ ಜಯಂತಿಯ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್, ಶಾಸಕ ಡಾ.ಉದಯ್ ಬಿ.ಗರುಡಾಚಾರ್, ಸಚಿವೆ ಜಯಮಾಲ, ಸಂಸದ ಪಿ.ಸಿ.ಮೋಹನ್, ಡಿ.ಕೆ.ಸುರೇಶ್ ಸೇರಿದಂತೆ 25 ಕ್ಕೂ ಅಧಿಕ ಜನರ ಹೆಸರು ಮುದ್ರಣಗೊಂಡಿದ್ದರೂ, ಯಾರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಇದಕ್ಕೆ ಹಡಪದ ಸಮುದಾಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News