ಆಗಸ್ಟ್ 3ನೆ ವಾರದಲ್ಲಿ ರೋಟಾ ವೈರಸ್, ಟೆಟಾನಸ್ ಡಿಫ್ತೀರಿಯಾ ಲಸಿಕಾ ಆಂದೋಲನ

Update: 2019-07-16 15:22 GMT

ಬೆಂಗಳೂರು, ಜು. 16: ಮಕ್ಕಳಲ್ಲಿ ಉಂಟಾಗುವ ಅತಿಸಾರ ಭೇದಿ ಹಾಗೂ ಗರ್ಭಿಣಿ ಸ್ತ್ರೀಯರಲ್ಲಿ ಉಂಟಾಗುವ ನಾಯಿ ಕೆಮ್ಮು ವಿರುದ್ಧ ರಕ್ಷಣೆ ಕಲ್ಪಿಸಲು ರಾಜ್ಯದಲ್ಲಿ ಆಗಸ್ಟ್ ಮೂರನೆ ವಾರದಲ್ಲಿ ರೋಟಾ ವೈರಸ್ ಹಾಗೂ ಟೆಟಾನಸ್ ಡಿಫ್ತೀರಿಯಾ ಲಸಿಕೆಯ ಆಂದೋಲನ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ರೋಟಾ ವೈರಸ್ ಲಸಿಕೆ ಹಾಗೂ ಟೆಟಾನಸ್ ಡಿಫ್ತೀರಿಯಾ ಲಸಿಕೆಯನ್ನು ಪರಿಚಯಿಸುವ ಕುರಿತಂತೆ ನಡೆದ ರಾಜ್ಯ ಮಟ್ಟದ ಲಸಿಕಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಆರು ವಾರಗಳು, ಹತ್ತು ವಾರಗಳು ಮತ್ತು ಹದಿನಾಲ್ಕು ವಾರಗಳ ವಯೋಮಾನದ ಶಿಶುಗಳಿಗೆ ರೋಟಾ ವೈರಸ್ ಲಸಿಕೆ, ಹತ್ತು ವರ್ಷ ಮತ್ತು ಹದಿನಾರು ವರ್ಷ ವಯೋಮಾನದ ಮಕ್ಕಳು ಹಾಗೂ ಗರ್ಭಿಣಿ ಸ್ತ್ರೀಯರಿಗೆ ಟೆಟಾನಸ್ ಡಿಫ್ತೀರಿಯಾ ಲಸಿಕೆ ನೀಡುವ ಅವಶ್ಯಕತೆ ಇದೆ. ಸಂಬಂಧಿತ ಲಸಿಕೆಯನ್ನು ಅವಶ್ಯಕ ಪ್ರಮಾಣದಲ್ಲಿ ಕೇಂದ್ರ ಸರಕಾರವು ಪೂರೈಸಬೇಕಾಗಿದೆ. ಆದಕಾರಣ, ಲಸಿಕೆಯ ಲಭ್ಯತೆಯ ಆಧಾರದ ಮೇರೆಗೆ ಆಂದೋಲನದ ಮಾದರಿಯಲ್ಲಿ ನೀಡಬಹುದೇ? ಅಥವಾ ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ನೀಡಬಹುದೇ? ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಸಭೆಗೆ ಅವರು ತಿಳಿಸಿದರು.

ಅತಿಸಾರ ಭೇದಿಯಲ್ಲಿ ಶೇ.40ರಷ್ಟು ಸಾವಿನ ಪ್ರಮಾಣಕ್ಕೆ ಕಾರಣವಾಗುತ್ತಿರುವ ಈ ವೈರಾಣುಗಳನ್ನು ತಡೆಗಟ್ಟಲು ರೋಟಾ ವೈರಸ್ ಲಸಿಕೆ ಉತ್ತಮ ಉಪಾಯ. ಅದೇ ರೀತಿ ನಾಯಿ ಕೆಮ್ಮು ತಡೆಗಟ್ಟಲು ಟೆಟಾನಸ್ ಡಿಫ್ತೀರಿಯಾ ಲಸಿಕೆ ಸಹಕಾರಿ ಎಂದರು. ಶಿಕ್ಷಣ, ವೈದ್ಯಕೀಯ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಹಾಗೂ ಕಾರ್ಮಿಕ ಇಲಾಖೆಗಳ ಸಹಯೋಗದೊಂದಿಗೆ ಆರೋಗ್ಯ ಇಲಾಖೆ ಸಂಯುಕ್ತವಾಗಿ ಕಾರ್ಯ ನಿರ್ವಹಿಸಿ, ಮಕ್ಕಳು ಹಾಗೂ ಗರ್ಭಿಣಿ ಸ್ತ್ರೀಯರ ಆರೋಗ್ಯವನ್ನು ರಕ್ಷಿಸಲು ಮುಂದಾಗಬೇಕಿದೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕ ಡಿ.ಎಸ್.ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News