ಕಾಂಗ್ರೆಸ್ ಶಾಸಕರು ರೆಸಾರ್ಟ್‌ಗೆ ಸ್ಥಳಾಂತರ

Update: 2019-07-16 15:23 GMT

ಬೆಂಗಳೂರು, ಜು.16: ವಿಧಾನಮಂಡಲದ ಅಧಿವೇಶನ ಆರಂಭಗೊಂಡ ದಿನದಿಂದ ಯಶವಂತಪುರ ಸಮೀಪದ ಗೊರುಗುಂಟೆಪಾಳ್ಯದಲ್ಲಿರುವ ತಾಜ್ ವಿವಾಂತ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್ ಶಾಸಕರು, ಇಂದು ದೇವನಹಳ್ಳಿ ಸಮೀಪದ ಹೆಗ್ಗನಹಳ್ಳಿಯಲ್ಲಿರುವ ಪ್ರಕೃತಿ ರೆಸಾರ್ಟ್‌ಗೆ ಸ್ಥಳಾಂತರಗೊಂಡಿದ್ದಾರೆ.

ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಎಲ್ಲ ಶಾಸಕರನ್ನು ಎರಡು ಬಸ್‌ಗಳಲ್ಲಿ ಹೊಟೇಲ್‌ನಿಂದ ರೆಸಾರ್ಟ್‌ಗೆ ಸ್ಥಳಾಂತರಿಸಲಾಯಿತು. ಅಧಿವೇಶನ ಮುಗಿಯುವರೆಗೆ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು ಇದೇ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ವಿಶ್ವಾಸಮತ ಯಾಚನೆ ಮಾಡುವ ಪ್ರಕ್ರಿಯೆ ಮುಗಿಯುವವರೆಗೆ ಯಾವುದೇ ಕಾರಣಕ್ಕೂ ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗದಂತೆ ತಡೆಯಲು ಎಲ್ಲ ಶಾಸಕರನ್ನು ಒಂದೆಡೆ ಇರಿಸಿಕೊಳ್ಳಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.

ದಿಗ್ಬಂಧನ: ರೆಸಾರ್ಟ್‌ನಲ್ಲಿ ಎಲ್ಲ ಶಾಸಕರಿಗೆ ಸಂಪೂರ್ಣ ದಿಗ್ಬಂಧನದಲ್ಲಿಡಲಾಗಿದ್ದು, ಪ್ರತಿಯೊಬ್ಬ ಶಾಸಕರ ಮೇಲೂ ಮುಖಂಡರು ಕಣ್ಗಾವಲು ಇರಿಸಿದ್ದಾರೆ. ರೆಸಾರ್ಟ್‌ನಿಂದ ಹೊರಬರಲು ಯತ್ನಿಸಿದ ಭದ್ರಾವತಿಯ ಶಾಸಕ ಸಂಗಮೇಶ್‌ರನ್ನು ಹೊರ ಹೋಗದಂತೆ ಮುಖಂಡರು ತಡೆಯೊಡ್ಡಿದ ಘಟನೆಯು ಜರುಗಿತು.

ಕುಮಾರಕೃಪಾ ಅತಿಥಿ ಗೃಹದಲ್ಲಿ ಸಭೆ: ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಗೊಳಿಸಿದ ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೊತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅತೃಪ್ತ ಶಾಸಕರ ಅರ್ಜಿ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ಕುರಿತು ಚರ್ಚೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News