ಪುಷ್ಪಗಳಲ್ಲಿ ಅರಳಲಿರುವ ಒಡೆಯರ್-ದಸರಾ: ಆ.9 ರಿಂದ ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನ

Update: 2019-07-16 17:01 GMT

ಬೆಂಗಳೂರು, ಜು.16: ಸ್ವಾತಂತ್ರೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ನಗರದ ಲಾಲ್‌ಬಾಗ್‌ನಲ್ಲಿ ಆ.9 ರಿಂದ 18 ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಈ ಬಾರಿ ಚಾಮರಾಜ ಒಡೆಯರ್‌ಗೆ ಪ್ರದರ್ಶನವನ್ನು ಅರ್ಪಣೆ ಮಾಡಲಾಗುತ್ತಿದೆ.

ಪ್ರತಿವರ್ಷವೂ ಒಬ್ಬೊಬ್ಬರಿಗೆ ಸ್ವಾತಂತ್ರೋತ್ಸವದ ಫಲಪುಷ್ಪ ಪ್ರದರ್ಶನವನ್ನು ಅರ್ಪಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯದುವಂಶದ ಕೊನೆಯ ಮಹಾರಾಜ ಮತ್ತು ಸ್ವಾತಂತ್ರ್ಯ ಭಾರತದ ಮೈಸೂರು ರಾಜ್ಯದ ಮೊದಲ ರಾಜ್ಯಪಾಲ ಜಯಚಾಮರಾಜ ಒಡೆಯರ್ (ಜು.18, 1919) ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಈ ಬಾರಿಯ ಪ್ರದರ್ಶನವನ್ನು ಅವರಿಗೆ ಅರ್ಪಿಸಲು ಚಿಂತನೆ ನಡೆದಿದೆ.

ಸರಕಾರದ ಮುಖ್ಯ ಕಾರ್ಯದರ್ಶಿಯವರ ಸೂಚನೆ ಮೇರೆಗೆ ಯದುವಂಶದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಸ್ಮರಣಾರ್ಥ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುವುದು. ಆದರೂ ಈ ಸಂಬಂಧ ಮೈಸೂರು ಉದ್ಯಾನ ಕಲಾಸಂಘದ ಪದಾಧಿಕಾರಿಗಳು ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ಉದ್ಯಾನ ಕಲಾಸಂಘ ಹಾಗೂ ರಾಜ್ಯ ತೋಟಗಾರಿಕೆ ಇಲಾಖೆಗಳ ಸಹಯೋಗದೊಂದಿಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಜಯಚಾಮರಾಜ ಒಡೆಯರ್ ಅವರ ಜೀವನ ಚರಿತ್ರೆಯನ್ನು ಪುಷ್ಪಗಳಿಂದ ಅನಾವರಣಗೊಳಿಸಲು ನಿರ್ಧರಿಸಲಾಗಿದೆ.

1940 ಸೆಪ್ಟೆಂಬರ್‌ನಲ್ಲಿ ಮಹಾರಾಜರಾಗಿ ಪಟ್ಟಾಭಿಷೇಕ ಪಡೆದ ಚಾಮರಾಜ ಒಡೆಯರ್, 1947 ವರೆಗೂ ಮಹಾರಾಜರಾಗಿದ್ದರು. ಅನಂತರ 1950ರಿಂದ 1956ರವರೆಗೆ ಮೈಸೂರು ರಾಜ್ಯದ ರಾಜಪ್ರಮುಖರಾಗಿದ್ದರು. ಇವರು ರಾಜ್ಯದ ಅಭಿವೃದ್ಧಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ. ಹೀಗಾಗಿ ಇವರ ಕುರಿತು ಇತಿಹಾಸ ತಜ್ಞರಿಂದ ಮಾಹಿತಿ ಸಂಗ್ರಹಿಸಿ ಏನೆಲ್ಲಾ ಮಾಡಬಹುದು ಎಂಬುದನ್ನು ನಿರ್ಧರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸಂಬಂಧ ಸೋಮವಾರ ಸಭೆ ನಡೆದಿದ್ದು, ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ. ಅಲ್ಲದೆ, ಈಗಾಗಲೇ ಪ್ರದರ್ಶನಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಪ್ರದರ್ಶನಕ್ಕೆ ಒಂದು ವಾರ ಮುಂಚಿತವಾಗಿ ಹೂವುಗಳು ಅರಳುವಂತೆ ಅಲ್ಲಲ್ಲಿ ಸಾಲು ಸಾಲಾಗಿ ಬಣ್ಣ ಬಣ್ಣದ ಹೂವಿನ ಗಿಡಗಳನ್ನು ನೆಡಲಾಗಿದೆ. ಬೆಳೆದು ನಿಂತಿರುವ ಆಲಂಕಾರಿಕ ಗಿಡಗಳನ್ನು ನಾನಾ ವಿನ್ಯಾಸದಡಿ ಟ್ರಿಮ್‌ಗೊಳಿಸಲಾಗುತ್ತಿದೆ. ಉದ್ಯಾನದ ನರ್ಸರಿ ಹಾಗೂ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಪ್ರದರ್ಶನಕ್ಕೆಂದೇ ವಿಶೇಷವಾಗಿ ಹೂವು, ತರಕಾರಿ ಹಾಗೂ ಹಣ್ಣಿನ ಸಸಿಗಳನ್ನು ಪಾಟ್‌ಗಳಲ್ಲಿ ಬೆಳೆಸಲಾಗುತ್ತಿದೆ.

ಪ್ರದರ್ಶನದ ವಿಶೇಷತೆ: ಮೈಸೂರು ರಾಜರ ಪ್ರತಿಮೆ, ದಸರಾ ಮಹೋತ್ಸವದಲ್ಲಿ ನಡೆಯುವ ಜಂಬೂಸವಾರಿ, ಮೈಸೂರು ಸಂಸ್ಥಾನದ ಚಿನ್ನದ ಸಿಂಹಾಸನವನ್ನು ಪುಷ್ಪಗಳ ಮೂಲಕ ಅನಾವರಣಗೊಳಿಸಲಾಗುವುದು. ಜತೆಗೆ ಮೈಸೂರು ಸಂಸ್ಥಾನಕ್ಕೆ ಸೇರಿದ (ಬೆಂಗಳೂರು ಅರಮನೆ, ಮೈಸೂರು ಅರಮನೆ ಹೊರತುಪಡಿಸಿ) ಯಾವುದಾದರೊಂದು ಅರಮನೆಯನ್ನು ಆಯ್ಕೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News