ನೂರಾರು ವರ್ಷಗಳ ತಯಾರಿಯ ಫಲ ಆರೆಸ್ಸೆಸ್ ಪಡೆಯುತ್ತಿದೆ: ಹರ್ಷ ಮಂದಾರ್

Update: 2019-07-16 17:08 GMT

ಬೆಂಗಳೂರು, ಜು.16: ನೂರಾರು ವರ್ಷಗಳಿಂದ ಸಂಘಪರಿವಾರ ನಡೆಸಿದ ತಯಾರಿಯ ಪ್ರತಿಫಲವನ್ನು ಇಂದು ತಿನ್ನುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್‌ನ ನಿರ್ದೇಶಕ ಹರ್ಷ ಮಂದಾರ್ ಹೇಳಿದ್ದಾರೆ.

ಮಂಗಳವಾರ ನಗರದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಎಸ್‌ಯುಕೆ, ಪಿಯುಸಿಎಲ್, ಮೂವ್‌ಮೆಂಟ್ ಫಾರ್ ಜಸ್ಟೀಸ್ ಸೇರಿದಂತೆ ವಿವಿಧ ಸಂಘಟನೆಗಳ ಜಂಟಿಯಾಗಿ ಆಯೋಜಿಸಿದ್ದ ‘ದೌರ್ಜನ್ಯ ಕೊನೆಗಾಣಿಸುತ್ತಾ, ದ್ವೇಷ ಮುಕ್ತ ಸಮಾಜ ಕಟ್ಟೋಣ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭಾರತದಲ್ಲಿ ಒಂದು ಸಮುದಾಯವನ್ನೇ ಗುರಿಯಾಗಿಸಿಕೊಂಡು ನಿರಂತರವಾದ ದೌರ್ಜನ್ಯ, ದಬ್ಬಾಳಿಕೆ ಮಾಡಲಾಗುತ್ತಿದೆ. ಅನ್ಯಾಯ ಮಾಡುವವರಿಗೆ ಅಧಿಕಾರದಲ್ಲಿರುವವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದ ಅವರು, ನೂರಾರು ವರ್ಷಗಳಿಂದ ಸಂಘಪರಿವಾರ, ಆರೆಸ್ಸೆಸ್ ನಡೆಸಿದ ತಯಾರಿಯ ಪ್ರತಿಫಲವೇ ಇದಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಒಂದು ಸಮುದಾಯ ಅಥವಾ ಜನಾಂಗದ ವಿರುದ್ಧವಾಗಿ ಸಾಮೂಹಿಕವಾಗಿ ಅಸೂಯೆ, ದ್ವೇಷವನ್ನು ತುಂಬುವ ಕೆಲಸ ನಡೆಯುತ್ತಿದೆ. ದೊಡ್ಡ ಪ್ರಮಾಣದಲ್ಲಿ ಅದನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದ ಅವರು, ಒಂದು ಕ್ರೂರ ಘಟನೆಯನ್ನು ಕೆಲವು ಕಡೆಗಳಲ್ಲಿ ವಿಡಿಯೋ ಮಾಡಿ ಹಂಚುತ್ತಿದ್ದಾರೆ. ಆದರೂ, ಅವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಬದಲಿಗೆ ಸಂತ್ರಸ್ಥರ ಮೇಲೆಯೇ ಪ್ರಕರಣಗಳು ದಾಖಲಿಸುವ ಅತಿಕ್ರೂರ ಪರಿಸ್ಥಿತಿಯಲ್ಲಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ನಾವು ಕಾರವನ್ ಎ ಮೊಹಬ್ಬತ್‌ನ ಒಂದು ಭಾಗವಾಗಿ ದೇಶದಾದ್ಯಂತ ಸಂಚಾರ ಮಾಡುತ್ತಿದ್ದೇವೆ. ಗುಂಪು ಥಳಿತಕ್ಕೊಳಗಾದ ಪ್ರತಿ ಕುಟುಂಬವನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದೇನೆ. ನಾನು ಅವರಲ್ಲಿ ತುಂಬಾ ದುಃಖ, ಪ್ರತ್ಯೇಕತೆಯ ಭಾವ ಹಾಗೂ ಭೀತಿಯನ್ನು ನೋಡಿದೆ. ಅದನ್ನು ನೋಡಿದರೆ ನಮ್ಮ ಸಮಾಜ ಆಳದಿಂದ ಧ್ರುವೀಕರಣಗೊಳ್ಳುತ್ತಿದೆ ಎಂಬುದು ನನ್ನ ಭಾವನೆಯಾಗಿದೆ ಎಂದು ಅವರು ತಿಳಿಸಿದರು.

ನಮ್ಮ ಸಮಾಜದಲ್ಲಿ ಶೋಷಿತರ, ದಲಿತರ, ಅಲ್ಪಸಂಖ್ಯಾತರ ಮೇಲೆ ಅತಿಕ್ರೂರವಾಗಿ, ದ್ವೇಷ, ಅಸೂಯೆಯಿಂದ ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಿದ್ದರೂ, ಸಭ್ಯ ಸಮಾಜವು ಮೌನವಾಗಿದೆ. ಮತ್ತೊಂದು ಕಡೆ ಮಾಧ್ಯಮಗಳು ಅನ್ಯಾಯವನ್ನು ತೋರಿಸುವ ಬದಲಿಗೆ, ಅನ್ಯಾಯ ಮಾಡಿದವರನ್ನೇ ತೋರಿಸುವ ಮೂಲಕ ಅವರನ್ನು ಹೀರೋಗಳನ್ನಾಗಿ ಮಾಡುತ್ತಿದ್ದಾರೆ ಎಂದರು.

ದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳ ವಿರುದ್ಧ ಪ್ರತಿಯೊಬ್ಬರೂ ಜಾಗೃತಗೊಳ್ಳಬೇಕು ಹಾಗೂ ಇವುಗಳ ವಿರುದ್ಧ ಚಳವಳಿಗೆ ಇಳಿದು ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅನ್ಯಾಯದ ವಿರುದ್ಧ ನಡೆಯುತ್ತಿರುವ ಚಳವಳಿಯಲ್ಲಿ ನಾವೇನು ತರುತ್ತಿದ್ದೇವೆ ಎಂಬುದನ್ನು ಹಿಂತಿರುಗಿ ನೋಡಿಕೊಳ್ಳಬೇಕಿದೆ. ಭಯವಿಲ್ಲದ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಪಣ ತೊಡಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕ್ಯೂಯಲ್ ಫೌಂಡೇಷನ್‌ನ ಶರಾಬಿ ಅಲಿ, ಆಲ್ ಇಂಡಿಯಾ ಪೀಪಲ್ಸ್ ಫೋರಂನ ವಿದ್ಯಾ ದಿನಕರ್, ಪರ್ಯಾಯ ಕಾನೂನು ವೇದಿಕೆ ಅಪಿತ್ ಉಪಸ್ಥಿತರಿದ್ದರು.

ವಿಶ್ವದ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಜನರೇ ತನ್ನ ಜನಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ. ಅದೇ ರೀತಿ ಅಮೆರಿಕ ಅಧ್ಯಕ್ಷ ಟ್ರಂಪ್, ನಮ್ಮ ದೇಶದ ಪ್ರಧಾನಿ ಮೋದಿ ಆಯ್ಕೆಯಾಗಿದ್ದಾರೆ. ಆದರೆ, ಮೋದಿಯು 2014 ರ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ನೋಡಿ ಜನ ಮತ ಹಾಕಿದ್ದರು. 2019 ರ ಚುನಾವಣೆ ವೇಳೆಗೆ ಒಂದು ಭರವಸೆಯಿಲ್ಲದೆ ಕೇವಲ ದ್ವೇಷದಿಂದಲೇ ಚುನಾವಣೆ ಎದುರಿಸಿ ಗೆದ್ದಿದ್ದಾರೆ. ಇಂದು ಅದು ಅಧಿಕವಾಗಿ, ದಿನದಿಂದ ದಿನಕ್ಕೆ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

-ಹರ್ಷ ಮಂದಾರ್, ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್‌ನ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News