ಎರಡನೇ ಹಂತದ ಮೆಟ್ರೊ ಯೋಜನೆ: ತಪ್ಪು ಮಾಹಿತಿ ನೀಡಿ ಕಪ್ಪುಪಟ್ಟಿ ಸೇರಿದ ಕಂಪನಿ

Update: 2019-07-16 17:24 GMT

ಬೆಂಗಳೂರು, ಜು.16: ವಿಜಯ ಎನರ್ಜಿ ಪ್ಲಸ್ ಕಂಪನಿಯು ಎರಡನೇ ಹಂತದ ಮೆಟ್ರೊ ಯೋಜನೆಗೆ ಸಂಬಂಧಿಸಿದಂತೆ ಬ್ಯಾಂಕ್ ಠೇವಣಿ ಕುರಿತು ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಬಿಎಂಆರ್‌ಸಿಎಲ್ ಕಪ್ಪುಪಟ್ಟಿಗೆ ಸೇರಿಸಿದೆ.

ಕೆ.ಆರ್.ಪುರ-ಸಿಲ್ಕ್ ಬೋರ್ಡ್ ಮೆಟ್ರೊ ಮಾರ್ಗದ ಯೋಜನೆಗಾಗಿ ಬೆಸ್ಕಾಂ ಕೇಬಲ್‌ಗಳನ್ನು ಸ್ಥಳಾಂತರಿಸಬೇಕಿದೆ. ಇದಕ್ಕಾಗಿ ಟೆಂಡರ್ ಕರೆದು ವಿಜಯ ಕಂಪನಿ ಯನ್ನು ಆರಿಸಲಾಗಿತ್ತು. ಕಾಮಗಾರಿ ಆರಂಭಕ್ಕೆ ಮುನ್ನ ಕಂಪನಿಯು ಬ್ಯಾಂಕ್ ಠೇವಣಿಯನ್ನು ನೀಡಬೇಕಿತ್ತು. 91.51 ಲಕ್ಷ ರೂ. ಠೇವಣಿಯನ್ನು ಎಸ್‌ಬಿಐನಲ್ಲಿ ಇರಿಸಲಾಗಿದೆ ಎಂದು ತಿಳಿಸುವ ದಾಖಲೆಗಳನ್ನು ಕಂಪನಿಯು ಬಿಎಂಆರ್‌ಸಿಎಲ್‌ಗೆ ಸಲ್ಲಿಸಿತ್ತು. ಇದರ ಆಧಾರದಲ್ಲೆ ಟೆಂಡರ್ ಅನ್ನು ಕಂಪನಿಗೆ ನೀಡಿ ಕೆಲಸಕ್ಕೆ ಚಾಲನೆ ನೀಡಲು ಸಿದ್ಧತೆ ಮಾಡಲಾಗಿತ್ತು.

ಕೊನೆ ಹಂತದಲ್ಲಿ ಎಸ್‌ಬಿಐ ಬ್ಯಾಂಕ್‌ನಿಂದ ಮಾಹಿತಿ ಕೇಳಿದಾಗ ಯಾವುದೇ ಠೇವಣಿಯನ್ನು ಬ್ಯಾಂಕ್‌ನಲ್ಲಿ ಇರಿಸಿಲ್ಲ ಎಂಬ ಉತ್ತರ ಬಂದಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಬ್ಯಾಂಕ್ ಠೇವಣಿ ಇರಿಸುವುದು ಅತ್ಯಗತ್ಯವಾಗಿದ್ದು, ಈ ಪ್ರಕ್ರಿಯೆಯನ್ನು ನಡೆಸದೆ ವಂಚನೆ ಮಾಡಿದ್ದರಿಂದ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಇನ್ನು ಐದು ವರ್ಷಗಳವರೆಗೆ ಮೆಟ್ರೊ ಟೆಂಡರ್‌ನಲ್ಲಿ ಭಾಗವಹಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೆ.ಆರ್.ಪುರ-ಸಿಲ್ಕ್ ಬೋರ್ಡ್ ಯೋಜನೆ ಈಗಾಗಲೇ ತಡವಾಗಿದೆ. ಇದರ ಭಾಗವಾದ ಕೇಬಲ್ ಸ್ಥಳಾಂತರಿಸುವ ಕೆಲಸಕ್ಕೆ ಈಗ ಅಡಚಣೆಯಾಗಿದೆ. ಮತ್ತೊಮ್ಮೆ ಹೊಸದಾಗಿ ಟೆಂಡರ್ ಕರೆದು ಕೇಬಲ್ ಸ್ಥಳಾಂತರಿಸುವ ಕೆಲಸಕ್ಕೆ ಚಾಲನೆ ನೀಡಬೇಕಿದೆ. ಇನ್ನು, ಈ ಕುರಿತು ಬಿಎಂಆರ್‌ಸಿಎಲ್ ಹಿಂದೆಯೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಕಂಪನಿಯು ತಪ್ಪುಮಾಹಿತಿ ನೀಡಿದೆ ಎಂದು ತಿಳಿದಾಗ ನೋಟಿಸ್ ಜಾರಿ ಮಾಡಿ ಉತ್ತರಿಸಲು ಅವಕಾಶ ನೀಡಲಾಗಿತ್ತು. ಆದರೆ ಕಂಪನಿಯಿಂದ ಪ್ರತಿಕ್ರಿಯೆ ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News