ಮುಂಬೈನಲ್ಲಿರುವ ಶಾಸಕರ ಖರ್ಚಿನ ಮೂಲದ ಬಗ್ಗೆ ತನಿಖೆಗೆ ದಸಂಸ ಆಗ್ರಹ

Update: 2019-07-16 17:33 GMT

ಬೆಂಗಳೂರು, ಜು. 16: ರಾಜೀನಾಮೆ ನೀಡಿರುವ ಶಾಸಕರಿಗೆ ದೊಡ್ಡ ಮೊತ್ತದ ಆಮಿಷವೊಡ್ಡಿದ್ದು, ಅವರೆಲ್ಲರನ್ನು ಐಷಾರಾಮಿ ಹೊಟೇಲ್‌ನಲ್ಲಿಟ್ಟು ಅದರ ಖರ್ಚು, ವೆಚ್ಚಗಳನ್ನು ಯಾರು ನಿರ್ವಹಿಸುತ್ತಿದ್ದಾರೆಂಬ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ, ಸ್ಪೀಕರ್‌ಗೆ ದೂರು ನೀಡಿದೆ.

ಭೀಕರ ಸ್ವರೂಪದ ಬರ ಪರಿಸ್ಥಿತಿ ಆವರಿಸಿದ್ದು, ಕುಡಿಯುವ ನೀರಿನ ಸಮಸ್ಯೆ, ಕೃಷಿ ಬಿಕ್ಕಟ್ಟು ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳಲ್ಲಿ ಜನರು ತೊಳಲಾಡುತ್ತಿರುವ ವೇಳೆ ಜನಪ್ರತಿನಿಧಿಗಳು ರೆಸಾರ್ಟ್, ಹೊಟೇಲ್‌ಗಳಲ್ಲಿ ಕಾಲ ಕಳೆಯುತ್ತಿರುವುದು ಅಕ್ಷಮ್ಯ ಎಂದು ಸಮಿತಿ ಅಧ್ಯಕ್ಷ ಸಿ.ಎಸ್.ರಘು ಆಕ್ಷೇಪಿಸಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ತಂತ್ರ-ಪ್ರತಿತಂತ್ರಗಳಿಂದ ರಾಜ್ಯದ ಘನತೆ, ಗೌರವ ಹಾಳಾಗುತ್ತಿದೆ. ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ಥಿರಕ್ಕೆ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿರುವುದು ಬಹಿರಂಗವಾಗಿದೆ. ಈ ಸಂಬಂಧದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಕೋರಿದ್ದಾರೆ.

ರಾಜೀನಾಮೆ ನೀಡಿರುವ ಎಲ್ಲ ಶಾಸಕರನ್ನು ಕೂಡಲೇ ರಾಜ್ಯಕ್ಕೆ ಹಿಂದಿರುಗಲು ಸೂಚಿಸಬೇಕು. ಇಲ್ಲವೇ ಅವರನ್ನು ಅನರ್ಹಗೊಳಿಸಬೇಕು. ರಾಜಕೀಯ ತಂತ್ರ- ಪ್ರತಿತಂತ್ರಗಳನ್ನು ಬದಿಗಿಟ್ಟು ಸಮಸ್ಯೆಗಳ ಪರಿಹಾರಕ್ಕೆ ಶಾಸಕರ ಒಗ್ಗಟ್ಟಿನ ಪ್ರಯತ್ನ ನಡೆಸಬೇಕೆಂದು ಅವರು, ಸ್ಪೀಕರ್‌ಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News