ರೋಷನ್ ಬೇಗ್ ವಶಕ್ಕೆ ಪಡೆದ ಪ್ರಕರಣ: ರಾಜ್ಯ ಸರಕಾರ, ಎಸ್‌ಐಟಿಗೆ ಹೈಕೋರ್ಟ್ ನೋಟಿಸ್

Update: 2019-07-16 17:37 GMT

ಬೆಂಗಳೂರು, ಜು.16: ಐಎಂಎ ಸಂಸ್ಥೆಯ ವಂಚನೆ ಪ್ರಕರಣದಲ್ಲಿ ತಮಗೆ ಕಿರುಕುಳ ನೀಡದಂತೆ ಹಾಗೂ ಮುಕ್ತ ಓಡಾಟಕ್ಕೆ ಅಡ್ಡಿಪಡಿಸದಂತೆ ಎಸ್‌ಐಟಿಗೆ ನಿರ್ದೇಶನ ನೀಡುವಂತೆ ಕೋರಿ ಮಾಜಿ ಸಚಿವ, ಶಾಸಕ ರೋಷನ್ ಬೇಗ್ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರ, ಎಸ್‌ಐಟಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ. 

ಈ ಕುರಿತು ರೋಷನ್ ಬೇಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲ ಶ್ಯಾಮ್ ಸುಂದರ್ ಅವರು, ರಾಜ್ಯ ಸರಕಾರ ತನಿಖಾ ಸಂಸ್ಥೆಯನ್ನು ದುರುಪಯೋಗ ಮಾಡಿಕೊಂಡಿದೆ. ಬೇಗ್ ಜು.19ಕ್ಕೆ ವಿಚಾರಣೆಗೆ ಹಾಜರಾಗಲು ತಯಾರಿದ್ದರೂ ಬಲವಂತವಾಗಿ ತಡರಾತ್ರಿ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಪೀಠಕ್ಕೆ ತಿಳಿಸಿದರು.

ಎಸಿಬಿ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ಸರಕಾರದ ಪರವಾಗಿ ಬಾಲಕೃಷ್ಣ ಹಾಜರಾಗಿದ್ದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರ, ಎಸ್‌ಐಟಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜು.30ಕ್ಕೆ ಮುಂದೂಡಿತು. ಸೋಮವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಲು ಮುಂದಾದ ಸಂದರ್ಭದಲ್ಲಿ ಎಸ್‌ಐಟಿ ಅಧಿಕಾರಿ ಗಿರೀಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News