ಅಕ್ರಮ ರೆಸಾರ್ಟ್ ನಿರ್ಮಾಣ: ಸ್ಥಳ ಪರಿಶೀಲಿಸಲು ಅರಣ್ಯ ಇಲಾಖೆಗೆ ಹೈಕೋರ್ಟ್ ನಿರ್ದೇಶನ

Update: 2019-07-16 17:38 GMT

ಬೆಂಗಳೂರು, ಜು.16: ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಬಳ್ಳಾರಿ ಜಿಲ್ಲೆಯ ಸಂಡೂರು ಸಮೀಪ ರಜನಿ ಲಾಡ್ ಅವರು ರೆಸಾರ್ಟ್ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಜು.18ರಂದು ಸ್ಥಳ ಪರಿಶೀಲನೆ ನಡೆಸಿ ಎಂದು ಅರಣ್ಯ ಸರ್ವೇಕ್ಷಣಾಧಿಕಾರಿಗೆ ನಿರ್ದೇಶನ ನೀಡಿದೆ.

ಈ ಕುರಿತು ಅಶೋಕ್ ಲಾಡ್ ಅವರ ಪತ್ನಿ ರಜನಿ ಲಾಡ್ ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಸರ್ವೇ ವರದಿಯನ್ನು ಜು.23ಕ್ಕೆ ಕೋರ್ಟ್‌ಗೆ ಸಲ್ಲಿಸುವಂತೆ ನ್ಯಾಯಪೀಠ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣವೇನು: ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಸಂತೋಷ್ ಲಾಡ್ ಮತ್ತು ಅನಿಲ್ ಲಾಡ್ ಅವರ ಸಹೋದರ ಅಶೋಕ್ ಲಾಡ್‌ಗೆ 1999-2000ನೆ ಸಾಲಿನಲ್ಲಿ ಸಂಡೂರಿನ ತಾರಾನಗರದ ಸ.ನಂ 410ರ 3.65 ಎಕರೆ ಪ್ರದೇಶವನ್ನು ಅಂದಿನ ಸಹಾಯಕ ಆಯುಕ್ತ ಕೃಷಿಯೇತರ ಚಟುವಟಿಕೆಗೆ ನೀಡಿದ್ದರು. ಅಧಿಕಾರ ಬಳಸಿದ ಲಾಡ್ ಸಹೋದರರು, ಅರಣ್ಯ ಇಲಾಖೆಗೆ ಸೇರಿದ 47.24 ಎಕರೆ ಪ್ರದೇಶದಲ್ಲಿ ಐಷಾರಾಮಿ ಅಮೇಜಿಂಗ್ ವ್ಯಾಲಿ ರೆಸಾರ್ಟ್ ನಿರ್ಮಾಣಕ್ಕೆ ಅರಣ್ಯ ಒತ್ತುವರಿ ಮಾಡಿದ್ದಾರೆ ಎಂಬುದು ಅರಣ್ಯ ಹಾಗೂ ಕಂದಾಯ ಇಲಾಖೆಯ ಆರೋಪವಾಗಿತ್ತು. ಅಲ್ಲದೆ, ಬಳ್ಳಾರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ 2013ರ ನವೆಂಬರ್ 30ರಂದು ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ತಮ್ಮ ಸ್ವಂತ ಖರ್ಚಿನಿಂದ ತೆರೆವುಗೊಳಿಸಬೇಕೆಂದು ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ರಜನಿ ಲಾಡ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News