ತಬ್ರೇಝ್ ಅನ್ಸಾರಿ, ‘‘ಜೈ ಶ್ರೀರಾಮ್’’ ಮತ್ತು ದ್ವೇಷ ಹತ್ಯೆಗಳು

Update: 2019-07-16 18:35 GMT

ಕೆಲವು ವರ್ಷಗಳ ಹಿಂದಿನವರೆಗೆ ಕೋಮು ಹಿಂಸೆ ಒಂದು ಸಾಮೂಹಿಕ ದೃಶ್ಯವಾಗಿತ್ತು ಮತ್ತು ಸಮಾಜದ ಧ್ರುವೀಕರಣಕ್ಕೆ ಕಾರಣವಾಗಿತ್ತು. ಇಂದು ಆ ಸಾಮೂಹಿಕ ವಿಷಯವನ್ನು ಗೋಮಾಂಸ ಸಂಬಂಧಿ ವಿಷಯವಾಗಿ ಮಾಡಲಾಗಿದೆ. ಯಾವುದೋ ಒಂದು ಅಪರಾಧ ನೆಪ ಸರಣಿ ಹಿಂಸೆಗೆ ಕಾರಣವಾಗುತ್ತದೆ. ‘‘ಜೈ ಶ್ರೀರಾಮ್’’ಗೆ ಈಗ ಒಂದು ತಿರುವು ನೀಡಲಾಗಿದೆ; ‘‘ಜೈ ಶ್ರೀರಾಮ್’’ ಎಂದು ನಮಸ್ಕರಿಸುವ ರೀತಿಗೆ ಆಕ್ರಮಣಶೀಲ ರಾಜಕೀಯ ತಿರುವು ನೀಡಲಾಗಿದೆ.


ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಹದಿನೇಳನೇ ಸಭೆಯಲ್ಲಿ ಭಾರತದಲ್ಲಿ ಮುಸ್ಲಿಮರು ಹಾಗೂ ದಲಿತರ ವಿರುದ್ಧ ನಡೆಯುತ್ತಿರುವ ಗುಂಪು ಥಳಿತದ ವಿಷಯವನ್ನು ಎತ್ತಲಾಯಿತು. ಪ್ರಧಾನಿ ಮೋದಿಯವರು ಅಲ್ಪಸಂಖ್ಯಾತರನ್ನು ರಕ್ಷಿಸಲಾಗುವುದೆಂದು ಹೇಳಿದರಾದರೂ ಗುಂಪು ಥಳಿತದ ಪ್ರಕರಣಗಳು ಹೆಚ್ಚುತ್ತಲೇ ಇವೆ. ಓರ್ವ ಮುಸ್ಲಿಂ ಯುವಕ ತಬ್ರೇಝ್ ಅನ್ಸಾರಿಯನ್ನು ಕಂಬಕ್ಕೆ ಕಟ್ಟಿ ಹಾಕಿ ನಿರ್ದಯವಾಗಿ ಥಳಿಸಿ ‘‘ಜೈ ಶ್ರೀರಾಮ್’’ ಎಂದು ಹೇಳುವಂತೆ ಬಲಾತ್ಕರಿಸಲಾಯಿತು. ಇನ್ನೊಬ್ಬ ಮುಸ್ಲಿಂ ಹಫೀಝ್ ಮುಹಮ್ಮದ್ ಹಲ್ದಾರ್ ಎಂಬಾತನನ್ನು ರೈಲಿನಿಂದ ಹೊರಗೆ ತಳ್ಳಲಾಯಿತು. ಓರ್ವ ಟ್ಯಾಕ್ಸಿ ಚಾಲಕ ಫೈಝಲ್ ಉಸ್ಮಾನ್‌ನನ್ನು ಮುಂಬೈ ಸಮೀಪ ಥಳಿಸಲಾಯಿತು. ಹೀಗೆ ಥಳಿಸಲ್ಪಟ್ಟವರ ಯಾದಿ ಉದ್ದವಿದೆ ಮತ್ತು ಉದ್ದವಾಗುತ್ತಲೇ ಇದೆ.

ಸ್ವತಃ ಪ್ರಧಾನಿಯವರ ಹೇಳಿಕೆಯಲ್ಲಿ ಇಂತಹ ಥಳಿತಗಳಿಗೆ ಸರಕಾರದ ಪ್ರತಿಕ್ರಿಯೆ ಯಾವ ರೀತಿಯದ್ದೆಂಬುದು ಸ್ಪಷ್ಟವಾಗುತ್ತದೆ. ಅವರು ತಮ್ಮ ಹೇಳಿಕೆಯಲ್ಲಿ ಥಳಿಸಿದವರ ಅಪರಾಧವನ್ನು ಅಮುಖ್ಯ ಗೊಳಿಸಿ, ಅನ್ಸಾರಿ ಯಾವ ಜಾರ್ಖಂಡ್‌ಗೆ ಸೇರಿದ್ದಾನೋ ಆ ಜಾರ್ಖಂಡ್ ರಾಜ್ಯಕ್ಕೆ ಇಂತಹ ಘಟನೆಗಳಿಂದಾಗಿ ಕೆಟ್ಟ ಹೆಸರು ಬರುತ್ತಿದೆ ಎಂದರು. ಇದೇ ವೇಳೆ ರಾಷ್ಟ್ರವ್ಯಾಪಿಯಾಗಿ ನಡೆದ ಹಲವು ಸಭೆಗಳಲ್ಲಿ ಮುಸ್ಲಿಂ ಸಮುದಾಯದವರು ಮತ್ತು ಇತರರು ಇಂತಹ ಘಟನೆಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಮೀರತ್‌ನಲ್ಲಿ ನಡೆದ ಅಂತಹ ಒಂದು ಘಟನೆಯಲ್ಲಿ ಇಂತಹ ಪ್ರಕರಣಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ, ಘೋಷಣೆ ಕೂಗುತ್ತಿದ್ದ ನೂರಾರು ಯುವಕರ ವಿರುದ್ಧ ಪೊಲೀಸರು ದೂರು ದಾಖಲಿಸಿದರು.

ಈ ಘಟನೆಗಳು ನಿರ್ದಿಷ್ಟವಾಗಿ ತಬ್ರೇಝ್ ಅನ್ಸಾರಿಯ ಪ್ರಕರಣ, ವಿಶ್ವವ್ಯಾಪಿಯಾಗಿ ಗಮನ ಸೆಳೆದಿದೆ. ಅಮೆರಿಕದ ರಾಜ್ಯಾಂಗ ಕಾರ್ಯದರ್ಶಿ ಮೈಕೆಲ್ ಪಾಂಪ್ಯು ಧಾರ್ಮಿಕ ಸ್ವಾತಂತ್ರ್ಯದ ಪರವಾಗಿ ಮಾತನಾಡಬೇಕೆಂದು ಕರೆ ನೀಡಿದರು. ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳಲ್ಲಿ ಒಂದು ನಿರ್ದಿಷ್ಟ ಮಾದರಿ ಕಾಣಿಸುತ್ತದೆ: ಸಣ್ಣಪುಟ್ಟ ಅಪರಾಧಗಳಲ್ಲಿ ಅಥವಾ ಇನ್ಯಾವುದೋ ನೆಪದಲ್ಲಿ ಮುಸ್ಲಿಮರನ್ನು ಹಿಡಿಯಲಾಗುತ್ತದೆ; ಕೂಡಲೇ ಅಲ್ಲೊಂದು ಗುಂಪು ಸೇರುತ್ತದೆ; ಆ ಗುಂಪು ವ್ಯಕ್ತಿಯನ್ನು ಥಳಿಸುತ್ತದೆ; ಚೆನ್ನಾಗಿ ಥಳಿಸಿ ‘ಜೈ ಶ್ರೀರಾಮ್’ ಎಂದು ಹೇಳುವಂತೆ ಆ ವ್ಯಕ್ತಿಯನ್ನು ಬಲಾತ್ಕರಿಸುತ್ತದೆ. ಗೋಮಾಂಸದ ಅಥವಾ ಗೋ ರಕ್ಷಣೆಯ ಹೆಸರಿನ ಹಿನ್ನೆಲೆಯಲ್ಲಿ ಈ ಹಿಂಸಾ ಪ್ರಕರಣಗಳು ನಡೆಯುತ್ತವೆ. ಹಿಂಸೆ, ಗುಂಪು ದಾಳಿ, ಗುಂಪು ಥಳಿತ ಸ್ವಯಂ ಸ್ಫೂರ್ಥವಾಗಿ ನಡೆಯುವುದಲ್ಲ. ಇಂತಹ ಹಿಂಸೆಯ ಹಿಂದೆ ಎರಡು ಪ್ರಾಥಮಿಕವಾದ, ಅನಿರ್ಬಂಧಿತ ಪ್ರಕ್ರಿಯೆಗಳಿವೆ. ಮೊದಲನೆಯದಾಗಿ ವಿಶೇಷವಾಗಿ ಮುಸ್ಲಿಮರ ಮತ್ತು ಭಾಗಶಃ ಕ್ರಿಶ್ಚಿಯನ್ನರ ಕುರಿತಾಗಿ ತಪ್ಪುಅಭಿಪ್ರಾಯಗಳನ್ನು ಸೃಷ್ಟಿಸಿ ಹರಡಲಾಗಿದೆ. ಇಸ್ಲಾಂ ಒಂದು ವಿದೇಶಿ ಧರ್ಮ; ಮುಸ್ಲಿಂ ದೊರೆಗಳು ದಾಳಿಕೋರರು, ದೇವಾಲಯಗಳ ವಿನಾಶಕಾರರು; ಅವರಿಂದಾಗಿಯೇ ದೇಶದ ವಿಭಜನೆಯಾಯಿತು ಇತ್ಯಾದಿ ಮಿಥ್ಯೆಗಳನ್ನು ಹರಡಲಾಗಿದೆ. ಎರಡನೆಯದ್ದಾಗಿ ಇಂತಹ ತಪ್ಪು ಅಭಿಪ್ರಾಯಗಳು, ಮಿಥ್ಯೆಗಳು ಈಗಾಗಲೇ ಸಾಮಾಜಿಕ ಸಾಮಾನ್ಯ ತಿಳುವಳಿಕೆಯ ಒಂದು ಭಾಗವಾಗುವಂತೆ ಮಾಡಲಾಗಿದೆ. ಒಟ್ಟಿನಲ್ಲಿ ಮುಸ್ಲಿಮರನ್ನು ರಾಕ್ಷಸೀಕರಿಸುವ ಸಾಮಾಜಿಕ ಸಾಮಾನ್ಯ ತಿಳುವಳಿಕೆ ಯೋಚಿಸಬೇಕಾದ ವಿಚಾರವಾಗಿ ಬಿಟ್ಟಿದೆ.

ಮುಸ್ಲಿಂ ಸಮುದಾಯದ ವಿರುದ್ಧ ಒಂದು ರೀತಿಯ ಜನಮತವನ್ನು, ಒಪ್ಪಿಗೆಯನ್ನು ಸೃಷ್ಟಿಸಲಾಗಿದೆ, ಮ್ಯಾನುಫ್ಯಾಕ್ಚರ್ ಮಾಡಲಾಗಿದೆ. ಕೆಲವು ಸಾಮಾಜಿಕ ಗುಂಪುಗಳು ಹಿಂದೂ-ಮುಸ್ಲಿಂ ದೊರೆಗಳ ನಡುವಿನ ಯುದ್ಧಗಳಿಗೆ ಒಂದು ಧಾರ್ಮಿಕ ರೂಪ ನೀಡುವಲ್ಲಿ ಯಶಸ್ವಿಯಾಗಿವೆ. ಎಳೆಯ ಮನಸ್ಸುಗಳಲ್ಲಿ ಮುಸ್ಲಿಂ ವಿರೋಧಿ ದ್ವೇಷವನ್ನು ತುಂಬಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ಪಾಕಿಸ್ತಾನವನ್ನು ಎಳೆದು ತಂದು ಅದರ ವಿರುದ್ಧವಾದ ದ್ವೇಷವನ್ನು ಭಾರತದ ಮುಸ್ಲಿಮರ ಮೇಲೆ ಹೇರಲಾಗಿದೆ. ಒಟ್ಟಿನಲ್ಲಿ ಭಾರತದ ಮುಸ್ಲಿಂ ಸಮುದಾಯವನ್ನು ಅಸ್ಮಿತೆಗೆ ಸಂಬಂಧಿಸಿದ ಭಾವನಾತ್ಮಕ ವಿಷಯಗಳಿಗೆ ಗುರಿ (ಟಾರ್ಗೆಟ್) ಮಾಡಲಾಗಿದೆ.

ಕೆಲವು ವರ್ಷಗಳ ಹಿಂದಿನವರೆಗೆ ಕೋಮು ಹಿಂಸೆ ಒಂದು ಸಾಮೂಹಿಕ ದೃಶ್ಯವಾಗಿತ್ತು ಮತ್ತು ಸಮಾಜದ ಧ್ರುವೀಕರಣಕ್ಕೆ ಕಾರಣವಾಗಿತ್ತು. ಇಂದು ಆ ಸಾಮೂಹಿಕ ವಿಷಯವನ್ನು ಗೋಮಾಂಸ ಸಂಬಂಧಿ ವಿಷಯವಾಗಿ ಮಾಡಲಾಗಿದೆ. ಯಾವುದೋ ಒಂದು ಅಪರಾಧ ನೆಪ ಸರಣಿ ಹಿಂಸೆಗೆ ಕಾರಣವಾಗುತ್ತದೆ. ‘‘ಜೈ ಶ್ರೀರಾಮ್’’ಗೆ ಈಗ ಒಂದು ತಿರುವು ನೀಡಲಾಗಿದೆ; ‘‘ಜೈ ಶ್ರೀರಾಮ್’’ ಎಂದು ನಮಸ್ಕರಿಸುವ ರೀತಿಗೆ ಆಕ್ರಮಣಶೀಲ ರಾಜಕೀಯ ತಿುವು ನೀಡಲಾಗಿದೆ.

ಪ್ರತಿಯೊಂದು ಹಿಂಸಾ ಪ್ರಕರಣವನ್ನು ವಿವರವಾಗಿ ಚರ್ಚಿಸಬಹುದು. ಅದೇನಿದ್ದರೂ ‘ದ್ವೇಷ ಅಪರಾಧಗಳ’ ಮೂಲ ಕೋಮುವಾದೀಕೃತ ಸಾಮಾಜಿಕ ಸಾಮಾನ್ಯ ತಿಳುವಳಿಕೆಯಾಗಿಯೇ ಉಳಿದಿದೆ. ವಿಭಿನ್ನ ಧಾರ್ಮಿಕ ಸಮುದಾಯಗಳಲ್ಲಿ ದ್ವೇಷ ಭಾವನೆಯನ್ನು ತುಂಬಲಾಗಿದೆ. ಇದು ಭ್ರಾತೃತ್ವದ ಕಲ್ಪನೆಗೆ ವಿರುದ್ಧವಾಗಿದೆ.

ಅಲ್ಪಸಂಖ್ಯಾತರಿಗೆ ತಾವು ಸುರಕ್ಷಿತರು ಎಂಬ ಭಾವನೆ ಬರುವಂತೆ ನೋಡಿಕೊಳ್ಳಬೇಕು. ಇನ್ನೊಂದೆಡೆ ದ್ವೇಷದ ಬುನಾದಿಯನ್ನು, ಅವರ ಬಗ್ಗೆ ಇರುವ ತಪ್ಪುಅಭಿಪ್ರಾಯಗಳನ್ನು ಕಿತ್ತೆಸೆಯಬೇಕು.

ಭಾರತೀಯ ಸಮಾಜ ಇಂದು ಐಹಿಕ ಅಸ್ತಿತ್ವದ, ಆರೋಗ್ಯ ಮತ್ತು ಶಿಕ್ಷಣದ ಸಮಸ್ಯೆಗಳನ್ನು ಎದುರಿಸುತ್ತಿದೆ. ಧರ್ಮದ ಮುಖವಾಡ ಹೊತ್ತು ಸಮಾಜವನ್ನು ಕಾಡುತ್ತಿರುವ ವಿಭಾಜಕ ರಾಜಕಾರಣವನ್ನು ನಾವು ಕೊನೆಗಾಣಿಸಬೇಕು. ನಮ್ಮ ಮುಂದೆ ಬೃಹತ್ತಾದ, ನಾವು ಮಾಡಬೇಕಾದ ಕೆಲಸ ಇದೆ. ಇದು ದೇಶವನ್ನು ಒಂದುಗೂಡಿಸುವ ಕೆಲಸ. ದೇಶ ಒಂದಾಗದೇ ಶಾಂತಿ ಮತ್ತು ಅಭಿವೃದ್ಧಿ ಸಾಧ್ಯವಾಗಲಾರದು 

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News