ಸುಪ್ರೀಂಕೋರ್ಟ್ ಆದೇಶ: ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಿನ ನಡೆ ಏನಿರಬಹುದು?

Update: 2019-07-17 07:20 GMT

ಬೆಂಗಳೂರು, ಜು.17: ಅತೃಪ್ತ ಶಾಸಕರ ಬಂಡಾಯದಿಂದಾಗಿ ಕಾಂಗ್ರೆಸ್-ಜೆಡಿಎಸ್  ಮೈತ್ರಿ ಸರಕಾರದ ಅಳಿವು-ಉಳಿವಿನ ಪ್ರಶ್ನೆ ಉದ್ಭವಿಸಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚಿಸಲಿದ್ದಾರೆ. ಕಾಂಗ್ರೆಸ್ 12, ಜೆಡಿಎಸ್‌ನ 3 ಸೇರಿದಂತೆ ಒಟ್ಟು 15 ಶಾಸಕರ ರಾಜೀನಾಮೆಯಿಂದಾಗಿ ಇದೀಗ ಮೈತ್ರಿ ಸರಕಾರದ ಸಂಖ್ಯಾಬಲ 101ಕ್ಕೆ ಕುಸಿದಿದೆ. ಬಿಜೆಪಿ 105 ಶಾಸಕರ ಬಲ ಹೊಂದಿದ್ದು, ಇಬ್ಬರು ಪಕ್ಷೇತರ ಶಾಸಕರು ಬೆಂಬಲ ನೀಡಿದರೆ ಬಿಜೆಪಿಯ ಬಲ ಒಟ್ಟು 107ಕ್ಕೆ ಏರಲಿದೆ.

ಅತೃಪ್ತ ಶಾಸಕರು ಸದನಕ್ಕೆ ಭಾಗವಹಿಸುವಂತೆ ಒತ್ತಾಯ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಮೈತ್ರಿ ಸರಕಾರ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಗುರುವಾರ ಮುಖ್ಯಮಂತ್ರಿಯ ಮುಂದಿನ ನಡೆ ಏನಿರಬಹುದೆಂಬ ಕುತೂಹಲ ಮೂಡಿದೆ.

ಮುಖ್ಯಮಂತ್ರಿಯ ಮುಂದಿರುವ ಆಯ್ಕೆಗಳೇನು?

1. ನಾಳೆ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಈ ವೇಳೆ ಬಹುಮತ ಸಿಗದಿದ್ದರೆ ವಿದಾಯ ಭಾಷಣ ಮಾಡಿ ರಾಜ್ಯಪಾಲರ ಬಳಿ ಹೋಗಿ ರಾಜೀನಾಮೆ ಸಲ್ಲಿಸಬಹುದು.

 2. ಪ್ರಸ್ತುತ ಎಲ್ಲ ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ಹೀಗಾಗಿ ಬಹುಮತವಿದೆ ಎಂದು ಘೋಷಿಸಿಕೊಳ್ಳಬಹುದು.

3. ಅನರ್ಹತೆ ತೂಗುಗತ್ತಿ ಹಿನ್ನೆಲೆಯಲ್ಲಿ ಕೆಲ ಶಾಸಕರು ವಾಪಸ್ ಬಂದರೆ ಸರಕಾರ ಉಳಿಸಿಕೊಳ್ಳಲು ಅವರಿಗೆ ಸಚಿವ ಸ್ಥಾನದ ಆಮಿಷವೊಡ್ಡಬಹುದು.

4. ಬಿಜೆಪಿಯ ಕೆಲ ಶಾಸಕರನ್ನು ಸೆಳೆಯುವ ಮೂಲಕ ಅವರನ್ನು ವಿಶ್ವಾಸಮತ ಯಾಚನೆ ವೇಳೆ ಗೈರು ಹಾಜರಿ ಮಾಡಿ ಬಹುಮತ ಸಾಬೀತುಪಡಿಸುವುದು.

5. ಸ್ಪೀಕರ್ ಅವರನ್ನು ಬಳಸಿಕೊಂಡು ಕೆಲವರ ಅನರ್ಹತೆ ಮಾಡಿ, ಇನ್ನೂ ಕೆಲವರಿಗೆ ವಿನಾಯಿತಿ ನೀಡಿ ಸರಕಾರ ಉಳಿಸಿಕೊಳ್ಳಲು ತಂತ್ರ ಹೆಣೆಯಬಹುದು.

6. ಶಾಸಕರಿಗೆ ವಿಪ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ವಿಶ್ವಾಸ ಮತಯಾಚಿಸಲು ನಿರ್ಧರಿಸಿದ್ದೆ. ಈಗ ವಿಪ್‌ಗೆ ಅವಕಾಶ ಇಲ್ಲದ ಕಾರಣ ವಿಶ್ವಾಸಮತ ಯಾಚನೆಯನ್ನು ಮುಂದೂಡುತ್ತೇನೆ ಎಂದು ಸಿಎಂ ಹೇಳಬಹುದು.

7. ಎಲ್ಲರನ್ನೂ ಅನರ್ಹಗೊಳಿಸಿ ಸರಕಾರ ಬಿದ್ದರೂ, ಮೈತ್ರಿ ಮುಖಂಡರು ಕಾನೂನು ಹೋರಾಟಕ್ಕೂ ಮುಂದಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News