ಪ್ರಾಣ ತ್ಯಾಗಕ್ಕಾಗಿ ಅನುಮತಿ ಕೋರಿ ಪತ್ರ ಬರೆದ ಬಾಲಕ

Update: 2019-07-17 07:35 GMT

ಪಾಟ್ನಾ : ಬಿಹಾರದ ಭಗಲ್ಪುರ್ ಮೂಲದ 15 ವರ್ಷದ ಬಾಲಕನೊಬ್ಬ ತನಗೆ ತನ್ನ ಹೆತ್ತವರ ನಡುವಿನ ಮನಸ್ತಾಪದಿಂದ  ಬೇಸರ ವುಂಟಾಗಿರುವುದರಿಂದ  ತನ್ನ ಜೀವನ ಅಂತ್ಯಗೊಳಿಸಲು ಅನುಮತಿ ಕೋರಿ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾನೆ. ಸುಮಾರು ಎರಡು ತಿಂಗಳ ಹಿಂದೆ ಬರೆದ ಈ ಪತ್ರದ ಕುರಿತಂತೆ ಪ್ರಧಾನಿ ಕಾರ್ಯಾಲಯ ಭಗಲ್ಪುರ್ ಜಿಲ್ಲಾಡಳಿತದ ಗಮನ ಸೆಳೆದಿದ್ದು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಬಾಲಕನ ತಂದೆ ಸರಕಾರಿ ಅಧಿಕಾರಿಯಾಗಿ ಜಾರ್ಖಂಡ್ ನಲ್ಲಿ ನೆಲೆಸಿದ್ದಾರೆ. ಆತನ ತಾಯಿ ಬಿಹಾರದ ಪಾಟ್ನಾದಲ್ಲಿ ಬ್ಯಾಂಕ್ ಒಂದರ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದಾರೆ.

ಬಾಲಕ ಬರೆದ ಪತ್ರವನ್ನು ರಾಷ್ಟ್ರಪತಿಗಳ ಕಚೇರಿಯಿಂದ ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಲಾಗಿತ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕನ ತಂದೆ  ಜಾರ್ಖಂಡ್ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯ ಮ್ಯಾನೇಜರ್ ಆಗಿ ದಿಯೋಘರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಬಾಲಕ ಅಲ್ಲಿ ತನ್ನ ಶಿಕ್ಷಣ ಮುಂದುವರಿಸಿದ್ದಾನೆ. ಆತನ ತಂದೆ-ತಾಯಿ ನಡುವಿನ ಮನಸ್ತಾಪಕ್ಕೆ ತಾಯಿಯೇ ಕಾರಣ ಎಂದು  ಬಾಲಕನ ಸಂಬಂಧಿಕರು ಹೇಳುತ್ತಿದ್ದು ಹೆತ್ತವರಿಬ್ಬರೂ ಪರಸ್ಪರ ವಿವಾಹೇತರ ಸಂಬಂಧ ಹೊಂದಿರುವ ಆರೋಪ ಹೊರಿಸಿ  ಪೊಲೀಸ್ ದೂರು ಕೂಡ  ದಾಖಲಿಸಿದ್ದಾರೆ.

ಹೆತ್ತವರ ನಡುವಿನ ಜಗಳ ತನ್ನ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಬಾಲಕ ತನ್ನ ಪತ್ರದಲ್ಲಿ ವಿವರಿಸಿದ್ದಾನೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ತಂದೆಯನ್ನು ಕೆಲ ಸಮಾಜ ವಿರೋಧಿ ಶಕ್ತಿಗಳು ತಾಯಿಯ ಸೂಚನೆಯಂತೆ ಬೆದರಿಸಿವೆ ಎಂದೂ ಆತ ಆರೋಪಿಸಿದ್ದಾನಲ್ಲದೆ ಇದರಿಂದ ಬೇಸತ್ತು ಪ್ರಾಣ ಕಳೆದುಕೊಳ್ಳಲು ಬಯಸಿದ್ದಾಗಿ ಆತ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News