ಕ್ರಿಕೆಟ್ ನ ಕತ್ತು ಹಿಸುಕಿದ ಐಸಿಸಿ ನಿಯಮಾವಳಿಗಳು

Update: 2019-07-17 07:47 GMT

ಕ್ರಿಕೆಟ್ ಬಗ್ಗೆ ಬರೆದಾಗೆಲ್ಲಾ ನನ್ನ ಗೆಳೆಯರು ಕೇಳುವುದಿದೆ "ನಿನಗೂ ಈ ಪಾಟಿ ಕ್ರಿಕೆಟ್ ನ ಹುಚ್ಚು ಇದೆಯಾ?"  

ಹೌದು ಕ್ರಿಕೆಟ್ ಎಂದರೆ ತೊರೆಯಲಾಗದ ಮೋಹ.. ರಾಮಮನೋಹರ್ ಲೋಹಿಯಾ ಅವರು ಬಹಿರಂಗವಾಗಿ ಮಾತನಾಡುವಾಗೆಲ್ಲಾ ಕ್ರಿಕೆಟ್ ಬಗ್ಗೆ ಸದಭಿಪ್ರಾಯದ ಮಾತುಗಳನ್ನಾಡುತ್ತಿರಲಿಲ್ಲ. ಅದು ವಸಾಹತುಶಾಹಿಗಳ ಕ್ರೀಡೆ ಎಂದು ಅದರ ಬಗ್ಗೆ ಉಪೇಕ್ಷೆ ತೋರುತ್ತಿದ್ದರಂತೆ. ಒಮ್ಮೆ ಅವರು ಇಷ್ಟದ ಏಕ್ ಸೌಬೀಸ್ ಪಾನ್ ಹಾಕಿಕೊಳ್ಳಲು ಪಾನ್ ವಾಲಾನ ಪೆಟ್ಟಿಗೆಯ ಮುಂದೆ ನಿಂತಿದ್ದರಂತೆ. ಪಾನ್ ವಾಲಾ ಕ್ರಿಕೆಟ್ ಕಾಮೆಂಟರಿ ಆಲಿಸುತ್ತಿದ್ದನಂತೆ. ಅವರು ಅವನತ್ತ ಬಾಗಿ ಮೆಲ್ಲನೇ "ಇಂಡಿಯಾ ಕಾ ಸ್ಕೋರ್ ಕಿತ್ನಾ ಹುವಾ" ಎಂದು ಕೇಳಿದರಂತೆ. ಬಹುಶಃ ಇದನ್ನು ಸುಮಾರು ವರ್ಷಗಳ ಹಿಂದೆ ಅಗ್ನಿ ಪತ್ರಿಕೆಯಲ್ಲೋ.....ಹಾಯ್ ಬೆಂಗಳೂರಲ್ಲೋ...‌ಓದಿದ ನೆನಪು. ಅದಕ್ಕೆ‌ ನಾನು ಸದಾ ಹೇಳುತ್ತಿರುತ್ತೇನೆ "ಅದು ಬಿಟ್ಟೇನೆಂದೆರೂ ಬಿಡದ ಮಾಯೆ..... ಅದೊಂದು ಮೋಹ...."

ನನ್ನಂತಹ ಗಂಭೀರ ಕ್ರಿಕೆಟ್ ಪ್ರೇಮಿಗಳಲ್ಲಿ ಬಹು ದೊಡ್ಡ ಸಂಖ್ಯೆಯ ಮಂದಿ ಕ್ರಿಕೆಟ್ ನಲ್ಲಿ ಭ್ರಷ್ಟಾಚಾರ, ಮ್ಯಾಚ್ ಫಿಕ್ಸಿಂಗ್ ಮುಂತಾದ ದಂಧೆಗಳು ನುಸುಳಿಕೊಂಡ ಬಳಿಕ ಕ್ರಿಕೆಟ್ ಚಟವನ್ನು ತ್ಯಜಿಸಿದ್ದರು. ಜಂಟ್ಲ್ ಮೆನ್ಸ್ ಗೇಮ್ ಅಗ್ಲಿ ಮೆನ್ಸ್ ಗೇಮ್ ಎಂದು ನಾವೆಲ್ಲಾ ವಿಮರ್ಶಿಸುತ್ತಿದ್ದೆವು. ಐಪಿಎಲ್ ಕ್ರಿಕೆಟ್ ಪ್ರಾರಂಭವಾದಾಗ ಅಯ್ಯೋ.... ಕ್ರಿಕೆಟನ್ನು ಕೊಂದೇ ಬಿಟ್ಟರಲ್ಲಪ್ಪಾ.....ಎಂದು ನೊಂದುಕೊಂಡಿದ್ದೆವು. ಹಾಗೆ ಕ್ರಿಕೆಟ್ ಚಟ ಬಿಟ್ಟವರೂ ವಿಶ್ವಕಪ್ ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಿಸುವುದನ್ನು ಮಾತ್ರ ಬಿಟ್ಟಿರಲಿಲ್ಲ. ಇನ್ನು ಕೆಲವರು ಐಪಿಎಲ್ ಬಂದ ಬಳಿಕ ಮತ್ತೆ ಕ್ರಿಕೆಟ್ ಚಟ ಅಂಟಿಸಿಕೊಂಡರು. ಅವರದಕ್ಕೆ ಕೊಡುವ ಸಬೂಬು "ಒಂಡೇ ಕ್ರಿಕೆಟ್ ಆದರೆ ಒಂದಿಡೀ ದಿನ ಟಿವಿಯ ಮುಂದೆ ಕೂತು ಸಮಯ ಪೋಲು ಮಾಡುವುದಕ್ಕಿಂತ ಹೃಸ್ವ ಅವಧಿಯಲ್ಲಿ ಮುಗಿಯುವ ಐಪಿಎಲ್ ನೂರು ಪಾಲು ಉತ್ತಮ. ಐಪಿಎಲ್ 20-20‌ ಇವುಗಳಿಂದ ಕ್ರಿಕೆಟ್ ನ ಗ್ಲಾಮರಸ್ ಇಮೇಜ್ ಹೆಚ್ಚಿದೆ. ಅದು ಒಂದು ಉದ್ಯಮವಾಗಿದೆ...‌ ಆದರೆ ಒಂಡೇ ಕ್ರಿಕೆಟ್ ಅಥವಾ ಟೆಸ್ಟ್ ಇನ್ನೂ ಕ್ರೀಡೆಯಾಗಿಯೇ ಉಳಿದಿದೆ. (ಈ ಕಾಲದಲ್ಲಿ‌ ಟೆಸ್ಟ್ ಕ್ರಿಕೆಟ್ ವೀಕ್ಷಿಸುವವರು ತೀರಾ ಇಲ್ಲ ಎನ್ನುವಷ್ಟು ವಿರಳವಾಗಿ ಬಿಟ್ಟಿದ್ದಾರೆ.)

ಹೇಗೋ ಹೇಗೆಲ್ಲಾ ಕ್ರಿಕೆಟ್ ಚಟ ತ್ಯಜಿಸಿದ ಅನೇಕರಿಗೆ ಮೊನ್ನೆಯ ವಿಶ್ವಕಪ್ ಫೈನಲ್ ಪಂದ್ಯ ಮತ್ತೆ ಕ್ರಿಕೆಟ್ ಹುಚ್ಚು ಹಿಡಿಯುವಂತೆ ಮಾಡಿತ್ತೆಂದರೆ ಅತಿಶಯೋಕ್ತಿಯಾಗದು.

ಏಕದಿನ ಕ್ರಿಕೆಟ್ ನ ಇತಿಹಾಸದಲ್ಲಿ ಇಂತಹ ರೋಚಕ ಪಂದ್ಯಾಟ ನಡೆದಿರಲಾರದು. ವಿಶ್ವಕಪ್ ಎಂದರೆ ಮುಂದಿನ ನಾಲ್ಕು ವರ್ಷಗಳ ವರೆಗೆ ವಿಶ್ವಕಪ್ ಎತ್ತಿದವರು ಕ್ರಿಕೆಟ್ ಜಗತ್ತಿನ ಅಧಿಪತಿ. ಕ್ರಿಕೆಟ್ ಜನಕರು ಇಂತಹದ್ದೊಂದು ಗೌರವಕ್ಕೆ ಭಾಜನರಾಗಲು ಈ ರೀತಿಯ ಪಂದ್ಯಾಟ ಪ್ರಾರಂಭವಾಗಿ ಬರೋಬ್ಬರಿ ನಲ್ವತ್ತನಾಲ್ಕು ವರ್ಷಗಳವರೆಗೆ ಕಾಯಬೇಕಾಯಿತು. ಮೊನ್ನೆಯ ಫೈನಲ್ ಪಂದ್ಯಾಟದ ಸಂದರ್ಭದಲ್ಲಿ ಎರಡೂ ತಂಡಗಳಿಗೆ ಸಮಬಲದ ಬೆಂಬಲಿಗರಿದ್ದರು. ಇಂಗ್ಲೆಂಡ್ ಗಿಂತಲೂ ನ್ಯೂಝಿಲೆಂಡ್ ತಂಡ ಗೆಲ್ಲಬೇಕೆಂದು ಬಯಸಿದವರು ತುಸು ಹೆಚ್ಚೇ ಇದ್ದರು ಎಂದರೂ ತಪ್ಪಾಗದು. ಅದಕ್ಕೆ ಕಾರಣವಿಲ್ಲದಿಲ್ಲ. ನ್ಯೂಝಿಲೆಂಡಿಗರ ಡೀಸೆನ್ಸಿ ಮತ್ತು ಕ್ರೀಡಾ ಸ್ಪೂರ್ತಿಯೇ ಅವರು ಜಗತ್ತಿನಾದ್ಯಂತದ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಅಚ್ಚಳಿಯದ ಸ್ಥಾನ ಗಳಿಸಲು ಕಾರಣವಾಗಿತ್ತು. ಅವರು ಮೊನ್ನೆಯೆಂದಲ್ಲ ಈ ಹಿಂದೆಯೂ ಹಾಗೆಯೇ ಇದ್ದರು. ಅವರು ಅಂಪೈರ್ ಗಳೊಂದಿಗೆ ವಾಗ್ವಾದ ನಡೆಸಿದ್ದೋ, ಎದುರಾಳಿ ತಂಡದವರೊಂದಿಗೆ ಜಗಳಾಡಿದ್ದೋ ಇಂತಹದ್ದು ಯಾರೂ ಕೇಳಿಯೇ ಇರಲಾರರು. ಇಂಗ್ಲೆಂಡ್ ತಂಡವೂ ಹೆಚ್ಚು ಕಡಿಮೆ ಅದೇ ರೀತಿಯ ಸದ್ವರ್ತನೆಗೆ ಹೆಸರುವಾಸಿಯಾಗಿದೆ.

ಮೊನ್ನೆಯ ಪಂದ್ಯದಲ್ಲಿ ಯಾರು ಗೆದ್ದರೆಂದರೆ ಅಧಿಕೃತವಾಗಿ ಇಂಗ್ಲೆಂಡ್. ಆದರೆ ಇಂಗ್ಲೆಂಡಿನ ಈ ಗೆಲುವನ್ನು ಮನಸಾರೆ ಒಪ್ಪಲು ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ತಯಾರಿಲ್ಲ. ಕಾರಣವೇನೆಂದರೆ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ನ ತಲೆ ಬುಡವಿಲ್ಲದ ಕೆಲವು ನೂತನ ನಿಯಮಾವಳಿಗಳು. ಅಂದ ಮಾತ್ರಕ್ಕೆ ಅಂತಹ ನಿಯಮಾವಳಿಗಳನ್ನು ಐಸಿಸಿ ಯಾರದ್ದೋ ಪರವಾಗಿ ರಚಿಸಿದ್ದಲ್ಲ. ಮೊನ್ನೆ ಇಂಗ್ಲೆಂಡ್ ಗೆದ್ದಾಗ ಹೆಚ್ಚಿನವರು ಇಲ್ಲಿ ಗೆದ್ದದ್ದು ಕ್ರಿಕೆಟ್ ಎಂದಿದ್ದರು. ಆದರೆ ವಾಸ್ತವದಲ್ಲಿ ಐಸಿಸಿಯ ಕೆಟ್ಟ ನಿಯಮಾವಳಿಗಳಿಂದ ಕ್ರಿಕೆಟ್ ಸೋತಿತ್ತು ಮತ್ತು ಅಂಪೈರ್ ಕುಮಾರ ಧರ್ಮಸೇನ ಅವರು ಕೊನೆಯ ಗಳಿಗೆಯಲ್ಲಿ ನೀಡಿದ  ತಪ್ಪು ತೀರ್ಪು ಕೂಡಾ ನ್ಯೂಝಿಲೆಂಡಿನ ಸೋಲಿಗೆ ಮತ್ತು ನಿಜಾರ್ಥದಲ್ಲಿ ಕ್ರಿಕೆಟಿನ ಸೋಲಿಗೆ ಕಾರಣವಾಗಿತ್ತು.

ಕೊನೆಯ ಓವರ್ ನಲ್ಲಿ ನ್ಯೂಝಿಲೆಂಡ್ ನ ಫೀಲ್ಡರ್ ಗಪ್ಟಿಲ್ ರನೌಟ್ ಗೆಂದು ವಿಕೆಟ್ ನತ್ತ ಎಸೆದ ಚೆಂಡು ಇಂಗ್ಲೆಂಡ್ ನ ಬ್ಯಾಟ್ಸ್ ಮ್ಯಾನ್ ಸ್ಟೋಕ್ಸ್ ಬ್ಯಾಟ್ ಗೆ ಬಡಿದು ಬೌಂಡರಿ ಗೆರೆ ದಾಟಿತ್ತು. ಆಗ ಅಸಲಿಗೆ ನೀಡಬೇಕಾದ ರನ್ 1+4=5.  ಆದರೆ ಕುಮಾರ ಧರ್ಮಸೇನ ಕ್ರಿಕೆಟ್ ಜಗತ್ತು ಈ ಹಿಂದೆಂದೂ ಕಂಡು ಕೇಳರಿಯದ 2+4=6 ಎಂಬ ವಿಚಿತ್ರ ತೀರ್ಪು ನೀಡಿದರು. ಆ ಮೂಲಕ ನ್ಯೂಝಿಲೆಂಡಿನ ಸೋಲಿಗೆ ಕಾರಣರಾದರು. ಬ್ಯಾಟ್ಸ್ ಮ್ಯಾನ್ ಗಳು ಮೂರು ರನ್ ಓಡಿದ ಬಳಿಕ ಓವರ್ ತ್ರೋದಲ್ಲಿ ಚೆಂಡು ಬೌಂಡರಿ ಗೆರೆ ದಾಟಿತೆಂದು ಏಳು ರನ್ ನೀಡಲಾದೀತೆ...? 

ಆ ಮೂಲಕ ಅಂಪೈರ್ ಧರ್ಮಸೇನ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಖಳರಾದರು.

ಖ್ಯಾತ ಅಂಪೈರ್ ಸೈಮನ್ ಟಫೆಲ್ ಫಾಕ್ ಸ್ಪೋರ್ಟ್ಸ್ ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಕುಮಾರ ಧರ್ಮಸೇನ ನೀಡಿದ ತೀರ್ಪು ಸಂಪೂರ್ಣವಾಗಿ ತಪ್ಪು. ಇಂಗ್ಲೆಂಡಿಗೆ ಐದು ರನ್ ಮಾತ್ರ ನೀಡಬೇಕಿತ್ತು. ಮತ್ತು‌ ಮುಂದಿನ ಎಸೆತವನ್ನು ಬೆನ್‌ ಸ್ಟೋಕ್ಸ್ ಬದಲಾಗಿ‌ ಆದಿಲ್‌ ರಶೀದ್ ಎದುರಿಸಬೇಕಿತ್ತೆಂದು ಹೇಳಿದ್ದಾರೆ.

ಐಸಿಸಿ ತಪ್ಪಿದ್ದೆಲ್ಲಿ?

ಸಾಮಾನ್ಯವಾಗಿ ಕ್ರಿಕೆಟ್ ನಲ್ಲಿ‌ ಫುಟ್ಬಾಲ್ ನಂತೆ ಪಂದ್ಯ ಟೈ ಆಗುವ ಸಾಧ್ಯತೆ ತೀರಾ ವಿರಳವಿರುತ್ತದೆ. ಆದರೆ ಮೊನ್ನೆ ಪಂದ್ಯ ಟೈ ಆಯಿತು. ಹಾಗೆ ಟೈ ಆಗಲು ಕುಮಾರ ಧರ್ಮಸೇನರ ತಪ್ಪು ತೀರ್ಪೇ ಮುಖ್ಯ ಕಾರಣ.

ಪಂದ್ಯ ಟೈ ಆದರೆ ಫುಟ್ಬಾಲ್ ನಲ್ಲಿ ಸೂಪರ್ ಗೋಲ್ ಇರುವಂತೆ ಈ ಬಾರಿ ಕ್ರಿಕೆಟ್ ನಲ್ಲೂ ಸೂಪರ್‌‌ ಓವರ್ ಎಂಬ ಹೊಸ ಪರಿಕಲ್ಪನೆ ಹುಟ್ಟು ಹಾಕಲಾಗಿತ್ತು. ಈ ಹಿಂದೆಲ್ಲಾ ಫೈನಲ್ ಪಂದ್ಯ ಟೈ ಆದರೆ ವಿಕೆಟ್ ಆಧಾರದಲ್ಲಿ ವಿಜಯಿಯನ್ನು ಘೋಷಿಸುವ ನಿಯಮವಿತ್ತು. ‌ಆದರೆ ಈ ಬಾರಿ ಸೂಪರ್ ಓವರ್ ಎಂಬ ಹೊಸ ನಿಯಮ ಜಾರಿಗೆ ತರಲಾಗಿತ್ತು.

ವಿಕೆಟ್ ಆಧಾರದಲ್ಲಿ ನಿರ್ಧರಿಸುವುದಕ್ಕಿಂತ ಇದು ಹೆಚ್ಚು ಸಮಂಜಸ ಮತ್ತು ನ್ಯಾಯಯುತ ಎಂಬುವುದರಲ್ಲಿ ಎರಡು ಮಾತಿಲ್ಲ. ಸೂಪರ್‌ ಓವರ್ ಎಂದರೆ ಕೇವಲ ಒಂದೇ ಓವರ್ ನ ಪಂದ್ಯಾಟ. ಒಂದು ಓವರ್ ನ ಪಂದ್ಯ ಟೈ ಆಗುವ ಸಾಧ್ಯತೆ ಅಧಿಕವಿರುತ್ತದೆ. ಆಗ ಮತ್ತೆ ಸೂಪರ್ ಓವರ್ ಇಟ್ಟರೆ ಅದು ನ್ಯಾಯಯುತವಾಗುತ್ತಿತ್ತು.‌ ಹಾಗೆ ಮಾಡುವುದು ಬಿಟ್ಟು ಮೊದಲ ಐವತ್ತು ಓವರ್ ಗಳ ಬೌಂಡರಿಯ ಆಧಾರದಲ್ಲಿ ಗೆಲುವನ್ನು ನಿರ್ಧರಿಸಿದ್ದು ತೀರಾ ಅಸಮರ್ಪಕ ಮತ್ತು ಅವೈಜ್ಞಾನಿಕ. ಹಾಗೆ ಮಾಡಿದ್ದು ಬ್ಯಾಟ್ಸ್ ಮ್ಯಾನ್ ಗಳು ವಿಕೆಟ್ ಗಳ ಮಧ್ಯೆ ಓಡಾಡಿ ಗಳಿಸಿದ ಸಿಂಗಲ್ಸ್‌, ಡಬಲ್ಸ್ ಮತ್ತು ಟ್ರಿಪಲ್ಸ್ ಗಳಿಗೆ ಬೆಲೆಯೇ ಇಲ್ಲದಂತಾಗಿಸಿದೆ.

ಸೂಪರ್ ಓವರ್ ಪಂದ್ಯವೂ ಟೈ ಆದಾಗ ಮೊದಲು‌ ಫುಲ್ ಮ್ಯಾಚ್ ಟೈ ಆದುದರಲ್ಲಿನ ಬೌಂಡರಿಗಳನ್ನು ಪರಿಗಣಿಸಿ ವಿಜಯಿಯನ್ನು ಘೋಷಣೆ ಮಾಡುವುದಾದರೆ ಸೂಪರ್ ಓವರ್ ಎಂಬ ಹೊಸ ಪರಿಕಲ್ಪನೆಯ ಅಗತ್ಯವೇನಿತ್ತು...?

ಒಂದೇ ಓವರ್ ನ ಪಂದ್ಯವೆಂದರೆ ಸಹಜವಾಗಿಯೇ ಸೆಕೆಂಡ್ ಬ್ಯಾಟಿಂಗ್ ಮಾಡುವ ತಂಡದ ಮೇಲೆ ಅಪಾರ ಒತ್ತಡವಿರುತ್ತದೆ. ಆದರೆ ಇಲ್ಲಿಯೂ ಐಸಿಸಿ ವಿಚಿತ್ರ ನಿಯಮಾವಳಿಯನ್ನು ರೂಪಿಸಿತ್ತು. ಅದೇನೆಂದರೆ ಫುಲ್ ಮ್ಯಾಚಿನಲ್ಲಿ ಯಾರು ಕೊನೆಗೆ ಬ್ಯಾಟಿಂಗ್ ಮಾಡಿದ್ದರೋ ಅವರಿಗೆ ಸೂಪರ್ ಓವರಿನಲ್ಲಿ‌ ಮೊದಲು ಬ್ಯಾಟಿಂಗ್ ಮಾಡಲು ಅವಕಾಶ. ನಾಣ್ಯ ಚಿಮ್ಮುಗೆ ಮಾಡಿ ಆಯ್ಕೆ ಮಾಡಿಕೊಳ್ಳುವ ಪುರಾತನ ನಿಯಮಾವಳಿಯನ್ನು ಐಸಿಸಿ ಮುರಿದು ಅವೈಜ್ಞಾನಿಕ ನಿಯಮಾವಳಿ ರೂಪಿಸಿತ್ತು. ಇದು ಸೂಪರ್‌ ಓವರನ್ನು ಮತ್ತಷ್ಟು ಅನ್ ಡೆಮಾಕ್ರಾಟಿಕ್ ಮಾಡಿ ಬಿಟ್ಟಿತ್ತು.

ಇಲ್ಲಿ ವಿಶ್ವಕಪ್ ಮಡಿಲಿಗೆ ಹಾಕಿಕೊಂಡ ಇಂಗ್ಲೆಂಡ್ ತಂಡದ ತಪ್ಪು‌ ಕಿಂಚಿತ್ತೂ ಇಲ್ಲ. ಮತ್ತು ನಿಯಮಾವಳಿಗಳನ್ನು ವಿಶ್ವಕಪ್ ಗೆ ಮುಂಚೆಯೇ ರೂಪಿಸಲಾಗಿತ್ತು.

ಎರಡೂ ತಂಡಗಳು ಅದ್ಭುತವಾದ ಕ್ರಿಕೆಟ್ ಆಡಿವೆ. ಇಲ್ಲಿ ಯಾರು ಸೋತರು ಯಾರು ಗೆದ್ದರು ಎನ್ನುವುದಕ್ಕಿಂತ ಐಸಿಸಿಯ ತಲೆಬುಡವಿಲ್ಲದ ನಿಯಮಾವಳಿಗಳಿಂದಾಗಿ ಮತ್ತು ಕುಮಾರ ಧರ್ಮಸೇನರ ತಪ್ಪು ತೀರ್ಪಿನಿಂದಾಗಿ ಜಂಟ್ಲ್ ಮೆನ್ಸ್ ಗೇಮ್ ಕ್ರಿಕೆಟ್ ಸೋತಿದೆ. ಅಥವಾ ಐಸಿಸಿಯೇ ಕ್ರಿಕೆಟ್ ನ ಕತ್ತು ಹಿಸುಕಿದೆ ಎನ್ನುವುದು ಹೆಚ್ಚು ಸೂಕ್ತ. ಪಂಡಿತರು ಪ್ರತೀ ಸಲವೂ ಸರಿಯಾಗಿರಬೇಕೆಂದೇನಿಲ್ಲವಲ್ಲ. ನೋವಿನ ಸಂಗತಿಯೇನೆಂದರೆ ಪಂಡಿತರಿಂದಾಗಿ ಕ್ರಿಕೆಟ್ ಸೋತಿದೆ. ಛೆ...‌ಹೀಗಾಗಬಾರದಿತ್ತು.

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News