ಶಾಸಕರು ಸದನದಿಂದ ಹೊರಗುಳಿಯಬೇಕಾದರೆ ಸ್ಪೀಕರ್ ಅನುಮತಿ ಬೇಕು: ಸಚಿವ ಕೃಷ್ಣಭೈರೇಗೌಡ

Update: 2019-07-17 12:38 GMT

ಬೆಂಗಳೂರು, ಜು.16: ‘ಶಾಸಕರು ಸದನದಿಂದ ಹೊರಗುಳಿಯಬೇಕಾದರೆ ಕಡ್ಡಾಯವಾಗಿ ಸ್ಪೀಕರ್ ಅವರ ಅನುಮತಿ ಪಡೆಯಬೇಕು ಎಂಬ ನಿಯಮವಿದೆ’ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೋರ್ಟ್ ಹೇಳಿರುವಂತೆ ಸದನದಲ್ಲಿ ಭಾಗವಹಿಸುವ ಅಥವಾ ಭಾಗವಹಿಸದಿರುವುದು ಶಾಸಕರ ವಿವೇಚನೆಗೆ ಬಿಟ್ಟದ್ದು. ಅವರನ್ನು ನಿಬಂಧನೆಗೊಳಪಡಿಸಬಾರದು ಎಂದಿದೆ. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ವಾದ ಮಂಡನೆಗೆ ನಮಗೆ ಅವಕಾಶ ಕೊಟ್ಟಿರಲಿಲ್ಲ. ಆ ಮೂಲಕ ಪಕ್ಷಗಳ ಹಕ್ಕನ್ನು ಮೊಟುಕುಗೊಳಿಸುವ ಪ್ರಸಂಗ ಇಲ್ಲಿ ಉದ್ಭವಿಸುತ್ತದೆ. ಈ ಸಂಬಂಧ ನಾವು ನಾಳೆಯೊಳಗೆ ನಿರ್ಧಾರ ಕೈಗೊಳ್ಳುತ್ತೇವೆ. ಈಗಾಗಲೇ ನಾವು ಚರ್ಚಿಸಿರುವ ಪ್ರಕಾರ ನಮ್ಮ ಪಕ್ಷದ ಎಲ್ಲ ಶಾಸಕರಿಗೆ ವಿಪ್ ಜಾರಿ ಮಾಡಬೇಕೆಂಬ ಅಭಿಪ್ರಾಯವಿದೆ. ಈ ಬಗ್ಗೆ ಮತ್ತೊಮ್ಮೆ ಸಮಲೋಚನೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೃಷ್ಣಭೈರೇಗೌಡ ಇದೇ ವೇಳೆ ಸ್ಪಷ್ಟನೆ ನೀಡಿದರು.

‘ನಿಮ್ಮ ಶಾಸಕಾಂಗ ಪಕ್ಷದ ಹಕ್ಕುಗಳು ನಿಮಗೆ ಬಿಟ್ಟಂತವು. ನಿಮಗಿರುವ ಹಕ್ಕುಗಳ ಪ್ರಕಾರ ನೀವು ನೀಡಿದ ನಿರ್ದೇಶನಗಳ ಉಲ್ಲಂಘನೆಯಾಗಿ ಸಂವಿಧಾನದ 10ನೆ ವಿಧಿ ಪ್ರಕಾರ ನನ್ನ ಮುಂದೆ ಅರ್ಜಿ ಸಲ್ಲಿಸಿದರೆ ವಿಚಾರಣೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸ್ಪೀಕರ್ ತಮಗೆ ತಿಳಿಸಿದ್ದಾರೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News