ಶಾಸಕರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ: ಎಚ್.ಡಿ.ರೇವಣ್ಣ

Update: 2019-07-17 16:23 GMT

ಬೆಂಗಳೂರು, ಜು.17: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಇಂದಿನ ಪರಿಸ್ಥಿತಿಗೆ ನಾನೇ ಕಾರಣ ಎಂದು ಬಿಂಬಿಸಲಾಗುತ್ತಿದೆ. ಆದರೆ, ನನ್ನಿಂದ ಯಾವ ಶಾಸಕರಿಗೂ ತೊಂದರೆಯಾಗಿಲ್ಲ. ಒಂದು ವೇಳೆ ಯಾರಿಗಾದರೂ ನನ್ನಿಂದ ನೋವಾಗಿದ್ದರೆ ಈಗಲೇ ಅವರ ಕ್ಷಮೆ ಕೇಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಇಲಾಖೆ ಹೊರತುಪಡಿಸಿ ಬೇರೆ ಯಾವ ಇಲಾಖೆಯಲ್ಲೂ ನಾನು ಹಸ್ತಕ್ಷೇಪ ಮಾಡಿಲ್ಲ, ಅದರ ಅಗತ್ಯವು ನನಗಿಲ್ಲ. ನನಗೆ ಮಂತ್ರಿ ಸ್ಥಾನವೇ ಸಾಕಾಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರೇವಣ್ಣ ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ ಅನ್ನೋದು ಕನಸಿನ ಮಾತು. ಯಾರಾದರೂ ಈ ರೀತಿ ತಿಳಿದುಕೊಂಡರೆ ಅದು ಅವರ ದಡ್ಡತನ. ನಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಒಡಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನಾನು ಐಷಾರಾಮಿ ಹೊಟೇಲ್‌ಗಳಲ್ಲಿ ಮಲಗಿಲ್ಲ. ಹತ್ತು ವರ್ಷ ಯಾವುದೇ ಅಧಿಕಾರ ನಮ್ಮ ಬಳಿ ಇರಲಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ 18 ವರ್ಷ ಅಧಿಕಾರ ಇರಲಿಲ್ಲ. ನನ್ನಿಂದ ಏನಾದರೂ ನೋವಾಗಿದ್ದರೆ ಶಾಸಕರು ಹೇಳಲಿ. ನಾನು ಅವರ ಕ್ಷಮೆ ಕೇಳಲು ಸಿದ್ಧ ಎಂದು ರೇವಣ್ಣ ತಿಳಿಸಿದರು.

ಜೆಡಿಎಸ್ ಶಾಸಕರಾದ ಎಚ್.ವಿಶ್ವನಾಥ್ ಹಾಗೂ ನಾರಾಯಣಗೌಡ ನನ್ನ ಬಗ್ಗೆ ಏನೇನೋ ಹೇಳಿದ್ದಾರೆ. ಅದೇ ರೀತಿ ಕಾಂಗ್ರೆಸ್ ಶಾಸಕ ಮುನಿರತ್ನ ನನ್ನ ವಿರುದ್ಧ ಎಲಿವೇಟೆಡ್ ಕಾರಿಡಾರ್ ಯೋಜನೆ ಕುರಿತು ಆರೋಪ ಮಾಡಿದ್ದಾರೆ ಎಂದು ಅವರು ಹೇಳಿದರು. ಎಲಿವೇಟೆಡ್ ಕಾರಿಡಾರ್ ಯೋಜನೆ ನನ್ನ ಅಧಿಕಾರಾವಧಿಯಲ್ಲಿ ರೂಪಿಸಿದ್ದಲ್ಲ, ಕಾಂಗ್ರೆಸ್ ಸರಕಾರದ ಅವಧಿಯಲ್ಲೆ ಇದಕ್ಕೆ ಒಪ್ಪಿಗೆ ನೀಡಲಾಗಿದೆ. ಕಾಂಗ್ರೆಸ್ ಸರಕಾರವೇ ಅದನ್ನು ಕೆಆರ್‌ಡಿಎಲ್‌ಗೆ ನೀಡಿತ್ತು. ನಾನು ಬಂದು ಬದಲಾವಣೆ ಮಾಡಿದೆ ಎನ್ನುವುದು ಸುಳ್ಳು. ಈ ಸಂಬಂಧ ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ. ಎಲಿವೇಟೆಡ್ ಕಾರಿಡಾರ್ ಬಗ್ಗೆ ಯಾವ ಶಾಸಕರೂ ನನ್ನ ಜೊತೆ ಮಾತನಾಡಿಲ್ಲ ಎಂದು ರೇವಣ್ಣ ಹೇಳಿದರು.

ನನ್ನ ಇಲಾಖೆಯಲ್ಲಿ ಮಾತ್ರ ವರ್ಗಾವಣೆ ಮಾಡಿದ್ದೇನೆ. ಬೇರೆ ಇಲಾಖೆಯಲ್ಲಿ ವರ್ಗಾವಣೆಗಳನ್ನು ಮಾಡಿಲ್ಲ. ನನ್ನ ಇಲಾಖೆಗೆ ಸಂಬಂಧಪಟ್ಟ ಕೆಲಸವನ್ನು ಮಾಡಿದ್ದೇನೆ. ಬೆಂಗಳೂರು ರಸ್ತೆ ಅಭಿವೃದ್ಧಿಯಷ್ಟೇ ಮಾಡಿದ್ದೇನೆ. ನನ್ನ ಇಲಾಖೆಯ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಮುಜುರಾಯಿ ಇಲಾಖೆಗೆ ಸೇರಿದ ಜಾಗ ತಿರುಪತಿಯಲ್ಲಿದೆ. ಅದರ ಅಭಿವೃದ್ಧಿ ನಮ್ಮ ಇಲಾಖೆಯಿಂದ ನಡೆಯುತ್ತಿದೆ ಎಂದು ರೇವಣ್ಣ ಹೇಳಿದರು.

ನಾನು ನನ್ನ ಜೀವನದಲ್ಲಿ ಒಂದೇ ಒಂದು ತಪ್ಪು ಮಾಡಿದ್ದೇನೆ. ಒಬ್ಬನನ್ನು ರಾಜ್ಯಸಭಾ ಸದಸ್ಯನಾಗಿ ಮಾಡಿದೆ. ಆ ರಾಜ್ಯಸಭಾ ಸದಸ್ಯನನ್ನು ಆ ದೇವಿ ನೋಡಿಕೊಳ್ಳುತ್ತಾಳೆ. ತಾಯಿ ಸನ್ನಿಧಿಯಲ್ಲಿ ಏನು ನಡೆದಿದೆ ಎಂಬುದು ಗೊತ್ತಿದೆ ಎಂದು ಅವರು ತಿಳಿಸಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಕಳೆದ ಒಂದು ವರ್ಷದಲ್ಲಿ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಆತ ನನ್ನ ತಮ್ಮ ಎಂದು ಈ ಮಾತು ಹೇಳುತ್ತಿಲ್ಲ. ಅವರು ಪಡುವ ಕಷ್ಟ ನೋಡಿ ನನಗೆ ಹೊಟ್ಟೆ ಉರಿಯುತ್ತೆ. ಬಡಪರ ಪರವಾಗಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಇದು ದೇವರು ಕೊಟ್ಟಿರುವ ಅಧಿಕಾರ. ಇದ್ದಷ್ಟು ದಿನ ಒಳ್ಳೆಯ ಕೆಲಸವನ್ನು ಮಾಡಿದ್ದೇವೆ. ರಾಜ್ಯದ ಜನತೆ ಚೆನ್ನಾಗಿರಬೇಕು ಎಂಬುದು ನಮ್ಮ ಆಶಯ. ನನಗೆ ಉಪ ಮುಖ್ಯಮಂತ್ರಿ ಆಗಬೇಕು ಎಂಬ ಆಸೆಯಿಲ್ಲ. ಈ ಬಗ್ಗೆ ಚರ್ಚೆಗಳು ನಡೆದಿರುವ ಕುರಿತು ನನಗೆ ಗೊತ್ತಿಲ್ಲ, ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದು ರೇವಣ್ಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News