ಪ್ಲಾಸ್ಟಿಕ್ ಬಳಕೆ, ಕಸ ವಿಂಗಡನೆ ಕುರಿತು ಅರಿವು: ಮೇಯರ್ ಗಂಗಾಂಬಿಕೆ

Update: 2019-07-17 16:44 GMT

ಬೆಂಗಳೂರು, ಜು.17: ಫ್ಲಾಸ್ಟಿಕ್ ಬಳಕೆ ನಿಷೇಧ, ಕಸ ವಿಂಗಡನೆ, ಪಿಓಪಿ ಗಣೇಶ ಮೂರ್ತಿ ಬದಲು ಮಣ್ಣಿನ ಗಣೇಶ ಮೂರ್ತಿ ಉಪಯೋಗಿಸುವಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಂತೆ ಮೇಯರ್ ಗಂಗಾಂಬಿಕೆ ಇಂದಿಲ್ಲಿ ಸೂಚನೆ ನೀಡಿದ್ದಾರೆ.

ಬುಧವಾರ ನಗರದ ಮಲ್ಲೇಶ್ವರಂನ ಐಪಿಪಿ ಕೇಂದ್ರದಲ್ಲಿ ಪಶ್ಚಿಮ ವಲಯದ ಶಾಲಾ ಮಕ್ಕಳು ಹಾಗೂ ಶಿಕ್ಷಕರ ಸಭೆ ನಡೆಸಿದ ಅವರು, ನೀರು ಪೋಲು ಮಾಡದಂತೆ ಜಾಗೃತಿ ವಹಿಸುವುದು, ಪ್ಲಾಸ್ಟಿಕ್ ಬಳಕೆ ನಿಷೇಧ, ಪಿಓಪಿ ಗಣೇಶ ಮೂರ್ತಿಗಳ ಬಳಕೆ ನಿಷೇಧ ಸೇರಿದಂತೆ ಹಲವು ವಿಷಯಗಳ ಕುರಿತು ಪಶ್ಚಿಮ ವಲಯದಲ್ಲಿ ಜಾಗೃತಿ ಜಾಥ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ನಗರದ ಎಲ್ಲ ವಲಯಗಳಲ್ಲಿಯೂ ಈ ರೀತಿಯ ಜಾಗೃತಿ ಜಾಥಗಳನ್ನು ನಡೆಸಲಾಗುತ್ತದೆ. ಶನಿವಾರ ದಕ್ಷಿಣ ವಲಯದಲ್ಲೂ ಜಾಥ ನಡೆಯಲಿದ್ದು, ಆ ವಲಯದ ಎಲ್ಲ ಶಾಲೆಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಪಶ್ಚಿಮ ವಲಯದಲ್ಲಿ 33 ಬಿಬಿಎಂಪಿ ಮತ್ತು 140 ಖಾಸಗಿ ಶಾಲೆಗಳಿವೆ. ಪರಿಸರ ಸಂರಕ್ಷಣೆಗಾಗಿ ಈ ಶಾಲೆಗಳ ಮಕ್ಕಳಿಗೆ ಎರಡು ನಿಮಿಷ ಜಾಗೃತಿ ಮೂಡಿಸಿದರೆ ಅವರ ಮನೆ ಹಾಗೂ ಅಕ್ಕಪಕ್ಕದ ಮನೆಯವರಿಗೂ ಮನವರಿಕೆ ಮಾಡಿಕೊಡುತ್ತಾರೆ ಎಂದರು.

ಎಲ್ಲ ವಲಯಗಳಲ್ಲಿ ಜಾಗೃತಿ ಜಾಥ ನಡೆಯುವ ಉದ್ದೇಶದಿಂದ ಜಾಥ ನಡೆಯುವ ಆಯಾ ವಲಯ ಜಂಟಿ ಆಯುಕ್ತರನ್ನೇ ನೋಡೆಲ್ ಅಧಿಕಾರಗಳನ್ನಾಗಿ ನೇಮಕ ಮಾಡಲಾಗಿದೆ. ಜಾಥ ಯಾವ ರಸ್ತೆಯಲ್ಲಿ, ಯಾವ ಸಮಯದಲ್ಲಿ ಸಾಗಬೇಕು ಎಂಬ ನೀಲಿ ನಕ್ಷೆಯನ್ನು ಸಿದ್ಧಪಡಿಸಿ, ಪಾಲಿಕೆ ವತಿಯಿಂದಲೇ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಪಾಲಿಕೆಯ ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್, ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News