ಶಾಸಕರ ರಾಜೀನಾಮೆ ಖಂಡಿಸಿ ವಿಧಾನಸೌಧ ಮುತ್ತಿಗೆ

Update: 2019-07-17 16:47 GMT

ಬೆಂಗಳೂರು, ಜು.17: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಶಾಸಕರ ನಡೆಯನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ವಿಧಾನಸೌಧ ಮುತ್ತಿಗೆ ಹಮ್ಮಿಕೊಳ್ಳಲಾಗಿತ್ತು.

ನಗರದ ಮೌರ್ಯ ವೃತ್ತದ ಬಳಿ ಜಮಾಯಿಸಿದ್ದ ನೂರಾರು ಜನ ಕಾರ್ಯಕರ್ತರು ಸಲಿಕೆ, ಗುದ್ದಲಿ, ಪಿಕಾಸಿಗಳನ್ನು ಕೈಯಲ್ಲಿಡಿದು ಮನೆ ಬಿಟ್ಟು ರೆಸಾರ್ಟ್‌ಗಳಲ್ಲಿ ತಂಗಿರುವ ಶಾಸಕರನ್ನು ವಿಧಾನಸೌಧಕ್ಕೆ ಪ್ರವೇಶಿಸದಂತೆ ತಡೆಯಲು ರಸ್ತೆ ಅಗೆದು, ಗೇಟುಗಳನ್ನು ಮುಚ್ಚುವ ಮೂಲಕ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಮೆರವಣಿಗೆ ಸಾಗುತ್ತಿದ್ದಂತೆಯೇ ಸ್ವಾತಂತ್ರ ಉದ್ಯಾನವನದ ಬಳಿ ತಡೆದ ಪೊಲೀಸರು ಸಮಿತಿಯ ಮುಖಂಡರನ್ನು ಬಂಧಿಸಿ, ಅನಂತರ ಬಿಡುಗಡೆ ಮಾಡಿದರು.

ಮೆರವಣಿಗೆಗೂ ಮೊದಲು ಮಾತನಾಡಿದ ಸಮಿತಿ ಅಧ್ಯಕ್ಷ ರವಿಕೃಷ್ಣಾರೆಡ್ಡಿ, ರಾಜ್ಯದಲ್ಲಿ ಬರದಿಂದ ಜನರು ತತ್ತರಿಸಿ ಹೋಗಿದ್ದಾರೆ. ಎಲ್ಲೆಡೆ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ತಮ್ಮ ಅಧಿಕಾರದ ಆಸೆಗಾಗಿ, ಕುಟುಂಬವನ್ನು, ರಾಜ್ಯದ ಜನರನ್ನು ಮರೆತು ರೆಸಾರ್ಟ್‌ಗಳಿಂದ ರಾಜಕೀಯ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಕರ್ನಾಟಕದ ರಾಜಕಾರಣದ ಬಗ್ಗೆ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೂ ಚರ್ಚೆಯಾಗುತ್ತಿದೆ. ಹಣ, ಹೆಂಡಕ್ಕೆ ಮತ ಹಾಕಿದ, ನಮ್ಮ ಜಾತಿಯವರು ಎಂದು ಗೆಲ್ಲಿಸಿದ ರಾಜ್ಯದ ಜನತೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಪ್ರಜಾಪ್ರಭುತ್ವದ ಘನತೆಯ ಸ್ಥಾನಗಳಲ್ಲಿರುವ ವ್ಯಕ್ತಿಗಳು ಹೀನ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕೋಮುವಾದಿ ಪಕ್ಷವನ್ನು ಸೋಲಿಸಲು ಹಲವು ಪ್ರಗತಿಪರರು, ಸಾಹಿತಿಗಳು, ಲೇಖಕರು 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಆದರೆ, ಇಂದು ಅದೇ ಪಕ್ಷದವರು ರಾಜೀನಾಮೆ ನೀಡಿ ಮುಂಬೈ ರೆಸಾರ್ಟ್‌ನಲ್ಲಿದ್ದಾರೆ ಎಂದ ಅವರು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಕೊಳೆತು ನಾರುತ್ತಿರುವ ಪಕ್ಷಗಳಾಗಿವೆ. ಕಾಂಗ್ರೆಸ್‌ನವರು ರಾಜ್ಯದ ಮಾನ ಮರ್ಯಾದೆ ತೆಗೆಯುತ್ತಿದ್ದಾರೆ. ಬುದ್ಧ, ಬಸವಣ್ಣ, ಗಾಂಧಿಯ ಬಗ್ಗೆ ಮಾತನಾಡುವವರು ಇದರ ಬಗ್ಗೆ ಬೀದಿಗಿಳಿದು ಹೋರಾಡಲಿ ಎಂದು ಹೇಳಿದರು.

ರಾಜ್ಯದ ಜನತೆಗೆ ಕರ್ತವ್ಯ ಪ್ರಜ್ಞೆಯಿಲ್ಲದಂತಾಗಿದೆ. ಶಾಸಕರು ರಾಜೀನಾಮೆ ನೀಡಿ, ರೆಸಾರ್ಟ್ ರಾಜಕಾರಣ ನಡೆಸುತ್ತಿದ್ದರೂ ಸುಮ್ಮನೆ ಕೂತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಭೀಕರವಾಗಲಿದೆ. ದೇಶ, ರಾಜ್ಯ ಉಳಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕಾದ ಅಗತ್ಯವಿದೆ ಎಂದು ಮನವಿ ಮಾಡಿದರು.

ಸಮಿತಿಯ ಉಪಾಧ್ಯಕ್ಷ ಲಿಂಗೇಗೌಡ ಮಾತನಾಡಿ, ಕರ್ನಾಟಕ ರಾಜ್ಯದ ರಾಜಕಾರಣ ಪಾತಾಳ ತಲುಪಿದೆ. ಬಿಹಾರದಲ್ಲಿ, ಗೋವಾದಲ್ಲಿ ರಾಜೀನಾಮೆ ನೀಡಿ, ರೆಸಾರ್ಟ್ ರಾಜಕಾರಣ ಮಾಡುವಾಗ, ಈ ಸ್ಥಿತಿ ಕರ್ನಾಟಕದಲ್ಲಿ ಬಂದರೆ, ಇಲ್ಲಿನ ಮತದಾರರು ಕ್ಷಮಿಸುವುದಿಲ್ಲ ಎನ್ನಿಸುತ್ತಿತ್ತು. ಆದರೆ, ಇಂದಿನ ರಾಜಕಾರಣಿಗಳು ಜನರ ಮನಸ್ಥಿತಿಯನ್ನೇ ಬದಲಿಸಿಬಿಟ್ಟಿದ್ದಾರೆ, ಅವರಿಗೆ ತಕ್ಕಂತೆ ಹೊಂದಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ನಾಳೆ(ಜು.18) ಸಮಿತಿ ವತಿಯಿಂದ ವಿಧಾನಸೌಧದೊಳಗೆ ಪ್ರವೇಶಿಸುತ್ತೇವೆ. ಶಾಸಕರ ನಡವಳಿಕೆಯನ್ನು ಗಮನಿಸುತ್ತೇವೆ. ಪಕ್ಷಾಂತರ ಮಾಡಲು ಮುಂದಾಗಿರುವ ಶಾಸಕರ ನಡೆಯನ್ನು ಖಂಡಿಸಿ ಧಿಕ್ಕಾರಗಳನ್ನು ಕೂಗಿ, ಕಪ್ಪು ಭಾವುಟ ಪ್ರದರ್ಶನ ಮಾಡಲಿದ್ದೇವೆ. ಈ ಸಂಬಂಧ ವಿಧಾನಸೌಧದೊಳಗೆ ಪ್ರವೇಶಿಸಲು ಅನುಮತಿ ನೀಡಬೇಕೆಂದು ಸ್ಪೀಕರ್‌ಗೆ ಮನವಿ ಮಾಡಲಾಗಿದೆ.

-ರವಿ ಕೃಷ್ಣಾರೆಡ್ಡಿ, ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News