ಸರಕಾರಿ ಸೇವೆಯ ಆಸೆಗೆ ಬಿದ್ದರೆ ಭವಿಷ್ಯವೇ ಹಾಳು: ನ್ಯಾ.ವಿಶ್ವನಾಥ ಶೆಟ್ಟಿ

Update: 2019-07-17 16:48 GMT

ಬೆಂಗಳೂರು, ಜು.17: ಉನ್ನತ ಶಿಕ್ಷಣ ಪಡೆದ ಅನೇಕರು, ಸರಕಾರಿ ಕೆಲಸವೇ ಬೇಕೆಂದು ಸಣ್ಣ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡರೆ ಭವಿಷ್ಯವೇ ಹಾಳಾಗುವುದು ನಿಶ್ಚಯ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಹೇಳಿದರು.

ಬುಧವಾರ ನಗರದ ಮಲ್ಲೇಶ್ವರಂನ 8ನೆ ಮುಖ್ಯರಸ್ತೆಯ ಚಿತ್ರಾಪುರ ಭವನದಲ್ಲಿ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ ಆಯೋಜಿಸಿದ್ದ, ಉಚಿತ ಕಂಪ್ಯೂಟರ್ ತರಬೇತಿಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪೊಲೀಸ್ ಪೇದೆ, ವಿವಿಧ ಇಲಾಖೆಗಳ ಡಿ-ದರ್ಜೆ ಸೇರಿದಂತೆ ಸಣ್ಣಪುಟ್ಟ ಹುದ್ದೆಗಳಲ್ಲಿ ಸ್ನಾತಕೋತ್ತರ, ಪಿಎಚ್‌ಡಿ ಗಳಿಸಿದ ಅನೇಕರು ಭರ್ತಿ ಆಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಉದ್ಯೋಗ ಭದ್ರತೆ ನೆಪ ಇಟ್ಟುಕೊಂಡು, ಉತ್ತಮ ಭವಿಷ್ಯ ಕೈಬಿಡುವುದು ಸರಿಯೂ ಅಲ್ಲ. ಈ ಬಗ್ಗೆ ಶಿಕ್ಷಣದ ಜಾಗೃತಿ ಬರಬೇಕು ಎಂದರು.

ಬದುಕಿನಲ್ಲಿ ಗುರಿ ಅಥವಾ ಸ್ವಾವಲಂಬನೆ ಸಾಧಿಸಬೇಕಾದರೆ ಸತತ ಪರಿಶ್ರಮ ಹಾಗೂ ತಾಳ್ಮೆಯು ಮಹತ್ವ ಪೂರ್ಣವಾಗಿರುತ್ತದೆ. ನಮ್ಮ ದೇಶದಲ್ಲಿ ಎಲ್ಲರಿಗೂ ಸರಕಾರಿ ಉದ್ಯೋಗ ದೊರಕಲು ಸಾಧ್ಯವಿಲ್ಲ. ಆದರೆ, ಪ್ರತಿಯೊಬ್ಬರೂ ಕೂಡ ಸ್ವಾವಲಂಬಿಯಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶಗಳಿದ್ದು ಯುವಜನರು ಇವುಗಳನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಲು ಚಿಂತನೆ ನಡೆಸುವ ಅಗತ್ಯತೆ ಇದೆ ಎಂದು ತಿಳಿಸಿದರು.

ತರಬೇತಿ ಸಂಸ್ಥೆಯ ನಿರ್ದೇಶಕ ಎಂ.ವಿ.ಶೇಷಾದ್ರಿ ಮಾತನಾಡಿ, ಇದುವರೆಗೂ ಬರೋಬ್ಬರಿ 8.40ಲಕ್ಷ ಮಂದಿ ವಿವಿಧ ತರಬೇತಿ ಪಡೆದಿದ್ದಾರೆ. ಪ್ರತಿ ವಾರ್ಷಿಕ ಸಾಲಿನಲ್ಲಿಯೂ ಹಲವು ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಅನುಕೂಲ ಆಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಪಿ.ಪಿ.ತಂಗವೇಲು ಸೇರಿದಂತೆ ಪ್ರಮುಖರಿದ್ದರು.

ವೇತನ ಹೆಚ್ಚಿಲ್ಲ

ಕೆಲವರು ಲೋಕಾಯುಕ್ತರಿಗೆ ವೇತನ, ಆದಾಯ ಹೆಚ್ಚಿರುತ್ತದೆ ಎಂದು ಭಾವಿಸಿಕೊಂಡಿದ್ದಾರೆ. ಆದರೆ, ವಾಸ್ತವವಾಗಿ ನಾನು ವಕೀಲನಾಗಿದ್ದರೆ ಹೆಚ್ಚಿನ ವೇತನ ಬರುತಿತ್ತು.

-ಪಿ.ವಿಶ್ವನಾಥ ಶೆಟ್ಟಿ ಲೋಕಾಯುಕ್ತ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News