ಪೌರಕಾರ್ಮಿಕರ ಸ್ಲಂ ಬೋರ್ಡ್ ಮನೆಗಳಿಗೆ ಅತಿಕ್ರಮಣ ಪ್ರವೇಶ: ಪಾಲಿಕೆ ಸದಸ್ಯನ ಬಂಧನಕ್ಕೆ ಆಗ್ರಹಿಸಿ ಧರಣಿ

Update: 2019-07-17 17:08 GMT

ಬೆಂಗಳೂರು, ಜು.17: ಪೌರಕಾರ್ಮಿಕರಿಗೆ ಸೇರಿದ ಸ್ಲಂ ಬೋರ್ಡ್ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿ, ವಸತಿಗಳನ್ನು ಅತಿಕ್ರಮಿಸಿಕೊಂಡಿರುವ ಶಾಸಕ ಮುನಿರತ್ನರವರ ಹಿಂಬಾಲಕ ವೇಲುನಾಯಕ್ ಹಾಗೂ ಅವರ ಸಹಚರರನ್ನು ಕೂಡಲೆ ಬಂಧಿಸಬೇಕು ಎಂದು ಆಗ್ರಹಿಸಿ ಸಮತಾ ಸೈನಿಕಾ ದಳದ ಕಾರ್ಯಕರ್ತರು ಬೆಂಗಳೂರು ಸ್ಲಂ ಬೋರ್ಡ್ ಕೇಂದ್ರ ಕಚೇರಿ ಮುಂಭಾಗ ಧರಣಿ ನಡೆಸಿದರು.

ಪಾಲಿಕೆ ಸದಸ್ಯ ವೇಲುನಾಯಕ್ ಪರವಾಗಿರುವ ಕೆಲವು ಗೂಂಡಾಗಳು ನಗರದ ಲಗ್ಗೆರೆಯ ಸ್ವೀಪರ್ ಕಾಲನಿಯ ಪೌರಕಾರ್ಮಿಕರಿಗೆ ಸೇರಿದ ಸ್ಲಂ ಬೋರ್ಡ್ ಮನೆಗಳನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಹಾಗೂ ಪೌರಕಾರ್ಮಿಕರನ್ನು ಬೆದರಿಸುತ್ತಿದ್ದಾರೆ. ಇದರಿಂದಾಗಿ ಪೌರಕಾರ್ಮಿಕರು ಬೀದಿಯಲ್ಲಿಯೆ ವಾಸ ಮಾಡುವಂತಾಗಿದೆ ಎಂದು ಧರಣಿ ನಿರತರು ಆರೋಪಿಸಿದರು.

ಈ ವೇಳೆ ಎಸ್‌ಡಿಎಸ್ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, ಕಳೆದ ಹತ್ತಾರು ವರ್ಷಗಳಿಂದ ಸುಮಾರು 32 ಪೌರಕಾರ್ಮಿಕ ಕುಟುಂಬಗಳು ವಸತಿಗಾಗಿ ಸರಕಾರದ ಮುಂದೆ ಬೇಡಿಕೆ ಸಲ್ಲಿಸಿದ್ದರು. ನಿರಂತರ ಹೋರಾಟದ ಫಲವಾಗಿ ಸರಕಾರ ಅವರಿಗೆ ಲಗ್ಗೆರೆಯಲ್ಲಿ ವಸತಿಗಳನ್ನು ನಿರ್ಮಿಸಿತ್ತು. ಆದರೆ, ಈ ವಸತಿಗಳಿಗೆ ಪಾಲಿಕೆ ಸದಸ್ಯ ವೇಲುನಾಯಕ್ ಪರವಾಗಿರುವ ಕೆಲವು ಗೂಂಡಾಗಳು ಅತಿಕ್ರಮಣ ಮಾಡಿ ಪೌರಕಾರ್ಮಿಕರನ್ನು ಬೆದರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬೆಂಗಳೂರು ನಗರವನ್ನು ಸ್ವಚ್ಛವಾಗಿಡಲು ಹಗಲಿರುಳು ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಜನಪ್ರತಿನಿಧಿಗಳೆ ಅನ್ಯಾಯ ಮಾಡುತ್ತಿದ್ದಾರೆ. ತಮ್ಮ ಅಧಿಕಾರ ಬಳಸಿ ಪೌರಕಾರ್ಮಿಕರಿಗೆ ಮನೆಗಳು ಸಿಗದಂತೆ ಮಾಡುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಸತಿ ಸಚಿವರು ಕೂಡಲೆ ಗಮನಹರಿಸಿ, ಪೌರಕಾರ್ಮಿಕರಿಗೆ ಸೇರಿರುವ ಮನೆಗಳನ್ನು ಅವರಿಗೇ ಬಿಟ್ಟುಕೊಡಬೇಕೆಂದು ಅವರು ಒತ್ತಾಯಿಸಿದರು.

ದುಡಿದು ತಿನ್ನುತ್ತಿರುವ ಪೌರಕಾರ್ಮಿಕರ ಮೇಲೆ ಗೂಂಡಾಪ್ರವೃತ್ತಿವುಳ್ಳ ಪಾಲಿಕೆ ಸದಸ್ಯ ವೇಲುನಾಯಕ್ ತನ್ನ ಸಹಚರರನ್ನು ಬಳಸಿಕೊಂಡು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ. ಜನಸಾಮಾನ್ಯರ ಮೇಲೆ ಗೂಂಡಾ ಪ್ರವೃತ್ತಿ ತೋರುವವರು ಜನಪ್ರತಿನಿಧಿಗಳಾಗಲು ಯಾವುದೆ ಅರ್ಹತೆ ಇಲ್ಲ. ಹೀಗಾಗಿ ಇವರನ್ನು ಕೂಡಲೆ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಪೌರಕಾರ್ಮಿಕರಿಗೆ ಸೇರಿದ ವಸತಿಗಳನ್ನು ಅತಿಕ್ರಮಿಸಿರುವ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಒಂದು ವಾರದ ಒಳಗೆ ವಸತಿಗಳನ್ನು ಪೌರಕಾರ್ಮಿಕರಿಗೆ ಒದಗಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಲಂ ಬೋರ್ಡ್ ಆಯುಕ್ತರು ಆಶ್ವಾಸನೆ ನೀಡಿದ್ದಾರೆ. ಇದು ಆಗದಿದ್ದರೆ ನಮ್ಮ ಹೋರಾಟ ಮತ್ತಷ್ಟು ಉಗ್ರ ಸ್ವರೂಪ ಪಡೆಯಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News