ರಾಜಕೀಯಕ್ಕಾಗಿ ಸಮುದಾಯದ ಜೊತೆ ಚೆಲ್ಲಾಟವಾಡಲ್ಲ: ಸಚಿವ ಝಮೀರ್ ಅಹ್ಮದ್

Update: 2019-07-17 18:11 GMT

ಬೆಂಗಳೂರು, ಜು.17: ರಾಜಕೀಯ ಉದ್ದೇಶಗಳಿಗಾಗಿ ಯಾವುದೇ ಕಾರಣಕ್ಕೂ ನನ್ನ ಸಮುದಾಯದ ಭಾವನೆಗಳೊಂದಿಗೆ ಚೆಲ್ಲಾಟವಾಡುವುದಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಬುಧವಾರ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ 153 ಮಂದಿ ಇಮಾಮ್ ಹಾಗೂ ಮುಅಝ್ಝಿನ್ ಗಳಿಗೆ ಹಜ್ ಯಾತ್ರೆಗೆ ಕಳುಹಿಸುತ್ತಿರುವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಇವತ್ತು ನಾನು ಅಧಿಕಾರದಲ್ಲಿ ಇರಲು, ಅಲ್ಲಾಹ್ ನ ಅನುಗ್ರಹ, ನನ್ನ ತಾಯಿಯ ಆಶೀರ್ವಾದ ಹಾಗು ಸಮುದಾಯದ ಪ್ರೀತಿ, ಬೆಂಬಲವೇ ಕಾರಣ. ಸಮುದಾಯದ ಹಿತವನ್ನು ಬಲಿಕೊಟ್ಟು ಅಧಿಕಾರದಲ್ಲಿರುವ ಬದಲು, ನಾನು ಮನೆಯಲ್ಲಿರುತ್ತೇನೆ ಎಂದು ಅವರು ಭಾವುಕವಾಗಿ ನುಡಿದರು.

22 ವರ್ಷಗಳಿಂದ ನಾನು ಮಸೀದಿಯ ಇಮಾಮ್ ಹಾಗೂ ಮುಅಝ್ಝಿನ್ ಗಳನ್ನು ಹಜ್ ಯಾತ್ರೆಗೆ ಕಳುಹಿಸುತ್ತಿದ್ದೇನೆ. ಈ ಬಾರಿ 330 ಅರ್ಜಿಗಳನ್ನು ವಿತರಿಸಲಾಗಿತ್ತು. ಈ ಪೈಕಿ ಖುರ್ರಾ(ಲಾಟರಿ) ಮೂಲಕ ಆಯ್ಕೆಯಾಗಿರುವ 153 ಮಂದಿಯನ್ನು ಕಳುಹಿಸುತ್ತಿದ್ದೇನೆ ಎಂದು ಅವರು ಹೇಳಿದರು. ಹಜ್ ಯಾತ್ರೆಗೆ ಹೋಗುತ್ತಿರುವವರು ನಮ್ಮ ದೇಶದ ಜಾತ್ಯತೀತ ಪರಂಪರೆ, ಕೋಮು ಸೌಹಾರ್ದತೆಯನ್ನು ಕಾಪಾಡುವಂತೆ ಅಲ್ಲಾಹನ ಬಳಿ ಪ್ರಾರ್ಥಿಸಿ. ಇವತ್ತು ನಮ್ಮ ದೇಶದಲ್ಲಿ ಈ ಗುಣಗಳನ್ನು ಉಳಿಸಬೇಕಾದ ಅಗತ್ಯವಿದೆ ಎಂದು ಝಮೀರ್ ಅಹ್ಮದ್ ಖಾನ್ ಪ್ರತಿಪಾದಿಸಿದರು.

ಎಐಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ನದೀಮ್ ಜಾವೀದ್ ಮಾತನಾಡಿ,‌ ದೇಶದಲ್ಲೆ ಕರ್ನಾಟಕ ಹಜ್ ಸಮಿತಿಯು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಹಜ್ ಯಾತ್ರೆಗೆ ಹೋಗುತ್ತಿರುವವರು ನಮ್ಮ ರಾಯಭಾರಿಗಳು ಎಂದರು. ಝಮೀರ್ ಅಹ್ಮದ್ ಖಾನ್ ಸಮುದಾಯದ ಪರವಾಗಿ ಉತ್ತಮವಾದ ಕೆಲಸ ಮಾಡುತ್ತಿದ್ದಾರೆ. ರಾಜಕೀಯವಾಗಿ ಅವರಿಗೆ ಮತ್ತಷ್ಟು ಶಕ್ತಿ ಹಾಗೂ ಸ್ಥಾನಮಾನ ಸಿಗಲಿ ಎಂಬುದು ನಮ್ಮ ಹಾರೈಕೆ. ಇಮಾಮ್ ಹಾಗೂ ಮುಅಝ್ಝಿನ್ ಗಳನ್ನು ಹಜ್ ಯಾತ್ರೆಗೆ ಕಳುಹಿಸುತ್ತಿರುವುದು ಪ್ರಸಂಶಾರ್ಹ ಎಂದು ಅವರು ಹೇಳಿದರು.

ಇತ್ತೀಚೆಗೆ ನಡೆಯುತ್ತಿರುವ ಘಟನಾವಳಿಗಳನ್ನು ನೋಡಿದರೆ ನಮ್ಮ ದೇಶಕ್ಕಾಗಿ ಪ್ರಾರ್ಥಿಸಬೇಕಾದ ಅಗತ್ಯವಿದೆ. ಕಾನೂನು, ಸುವ್ಯವಸ್ಥೆ ಉಳಿಯಬೇಕಿದೆ ಎಂದು ನದೀಮ್ ಜಾವೀದ್ ಹೇಳಿದರು.

ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಮುಹಮ್ಮದ್ ರಫೀಕ್ ವಾರ್ಸಿ, ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಖತೀಬ್  ಮೌಲಾನ ಮುಹಮ್ಮದ್ ಮಖ್ಸೂದ್ ಇಮ್ರಾನ್, ದಾರುಲ್ ಉಲೂಮ್ ಶಾ ವಲೀಉಲ್ಲಾ ಮುಖ್ಯಸ್ಥ ಮೌಲಾನ ಮುಹಮ್ಮದ್ ಝೈನುಲ್ ಆಬಿದೀನ್, ಮಸ್ಜಿದೆ ಉಮರ್ ಫಾರೂಕ್ ನ ಖತೀಬ್ ಮೌಲಾನ ಮುಹಮ್ಮದ್ ಮುಝಮ್ಮಿಲ್, ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್ ಖಾನ್ ಸರ್ದಾರ್, ಜೆಡಿಎಸ್ ವಕ್ತಾರ ತನ್ವೀರ್ ಅಹ್ಮದ್, ರಾಜ್ಯ ಹಜ್ ಸಮಿತಿ  ಮಾಜಿ ಅಧ್ಯಕ್ಷ ಝುಲ್ಫಿಕರ್ ಅಹ್ಮದ್ ಟಿಪ್ಪು, ಮುಖಂಡರಾದ ಸಯ್ಯದ್ ಸೈಫುಲ್ಲಾ, ವೈ.ಸಯೀದ್ ಅಹ್ಮದ್, ಶಕೀಲ್ ನವಾಝ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News