ಮೈತ್ರಿ ಸರಕಾರದ ಭವಿಷ್ಯ ಸುಪ್ರೀಂ ಕೋರ್ಟ್‌ನಲ್ಲೆ ತೀರ್ಮಾನ ಸಾಧ್ಯತೆ

Update: 2019-07-18 14:53 GMT

ಬೆಂಗಳೂರು, ಜು. 18: ಶಾಸಕರ ರಾಜೀನಾಮೆ ಸಂಬಂಧ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದಿಂದ ‘ವಿಪ್’ ನೀಡುವಂತಹ ಹಕ್ಕು ಮೊಟಕುಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿವೆ.

ಈ ಮಧ್ಯೆಯೇ ಮೈತ್ರಿ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೆ ಕಾಲಮಿತಿ ವಿಧಿಸಬೇಕೆಂದು ಕೋರಿ ಬಿಜೆಪಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದು, ಮೈತ್ರಿ ಸರಕಾರದ ಭವಿಷ್ಯ ಕೋರ್ಟ್ ತೀರ್ಪುಗಳ ಮೇಲೆಯೇ ಆಧರಿಸಲಿದೆ ಎಂದು ಹೇಳಲಾಗುತ್ತಿದೆ.

15 ಮಂದಿ ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾಗದೆ ವಿಶ್ವಾಸಮತ ಯಾಚನೆ ನಿರ್ಣಯ ಮಂಡನೆ ಸಲ್ಲ ಎಂದು ಮೈತ್ರಿ ಮುಖಂಡರು ಹೇಳುತ್ತಿದ್ದಾರೆ. ಆದರೆ, ಈ ಸರಕಾರಕ್ಕೆ ಬಹುಮತವೇ ಇಲ್ಲ. ಹೀಗಾಗಿ ಕೂಡಲೇ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ.

ಈ ಮಧ್ಯೆ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಸಂಬಂಧ ತೀರ್ಮಾನಿಸಲು ಕೆಲ ಕಾನೂನು ತೊಡಕುಗಳಿದ್ದು, ಅವುಗಳ ಪರಿಹಾರಕ್ಕೆ ಸ್ಪೀಕರ್ ರಮೇಶ್‌ಕುಮಾರ್ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದ್ದಾರೆ. ಅವರು ಏನೇ ತೀರ್ಮಾನ ಕೈಗೊಂಡರೂ ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆಗಳಿವೆ.

ರಾಜಕೀಯದ ಏಳು-ಬೀಳುಗಳ ನಡುವೆ ರಾಜ್ಯದಲ್ಲಿ ಹಲವು ನಾಟಕೀಯ ಬೆಳವಣಿಗೆಗಳ ನಡೆಯುತ್ತಿದೆ. ಸರಕಾರ ಉಳಿಸಿಕೊಳ್ಳಲು ಮೈತ್ರಿ ಮುಖಂಡರು ಹರಸಾಹಸ ಪಡುತ್ತಿದ್ದರೆ, ಮತ್ತೊಂದೆಡೆ ಮೈತ್ರಿ ಸರಕಾರ ಉರುಳಿಸಲು ವಿಪಕ್ಷ ಬಿಜೆಪಿ ತನ್ನೆಲ್ಲ ಪಟ್ಟುಗಳನ್ನು ಬಳಕೆ ಮಾಡುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News