ಮುಖ್ಯಮಂತ್ರಿ ವಿಶ್ವಾಸಮತ ಪ್ರಸ್ತಾವ ಮುಂದೂಡಲು ಕಾಂಗ್ರೆಸ್ ಸದಸ್ಯರ ಆಗ್ರಹ

Update: 2019-07-18 14:59 GMT

ಬೆಂಗಳೂರು, ಜು.18: ‘ಶಾಸಕರ ರಾಜೀನಾಮೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಗೊಂದಲದಿಂದ ಕೂಡಿದೆ. ಈ ಬಗ್ಗೆ ಸ್ಪಷ್ಟತೆ ಸಿಗುವವರೆಗೂ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಪ್ರಸ್ತಾವ ಮಂಡನೆ ಮುಂದೂಡಬೇಕು’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಪ್ರಸ್ತಾವದ ಮೇಲೆ ಮಾತನಾಡುತ್ತಿದ್ದ ವೇಳೆ ಕ್ರಿಯಾಲೋಪವೆತ್ತಿ ಮಧ್ಯಪ್ರವೇಶಿಸಿದ ಅವರು, ಶಾಸಕಾಂಗದ ಪಕ್ಷದ ನಾಯಕನಾಗಿ ನಮ್ಮ ಸದಸ್ಯರಿಗೆ ವಿಪ್ ನೀಡುವ ನನ್ನ ಅಧಿಕಾರ. ಆದರೆ, ತೀರ್ಪಿನ ಗೊಂದಲದಿಂದ ನನ್ನ ಅಧಿಕಾರ ಮೊಟಕುಗೊಂಡಿದೆ ಎಂದು ಗಮನ ಸೆಳೆದರು.

ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ. ಆದರೆ, 15 ಮಂದಿ ಶಾಸಕರಿಗೆ ವಿಪ್ ನೀಡುವಂತಿಲ್ಲ ಎಂದು ಎಲ್ಲೂ ಹೇಳಿಲ್ಲ. ಅದೇ ವೇಳೆ ಆ ಶಾಸಕರು ಸದನಕ್ಕೆ ಬರುವಂತೆ ನಿಬಂಧನೆ ವಿಧಿಸುವಂತಿಲ್ಲ ಎಂದು ಉಲ್ಲೇಖಿಸಿದೆ. ನಾನು ನೀಡಿದ ವಿಪ್ ಉಲ್ಲಂಘಿಸಿದ್ದಾರೆ. ಹೀಗಾಗಿ ಮೊದಲು ‘ವಿಪ್’ ವಿಚಾರ ಇತ್ಯರ್ಥ ಆಗುವವರೆಗೂ ವಿಶ್ವಾಸಮತ ಯಾಚನೆ ಪ್ರಸ್ತಾವ ಮುಂದೂಡಬೇಕು ಎಂದು ಕೋರಿದರು.

ಕೋರ್ಟ್ ಆದೇಶದಲ್ಲಿ ಶಾಸಕಾಂಗ ಪಕ್ಷದ ನಾಯಕನಾದ ನನ್ನ ಅಧಿಕಾರದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪವಾಗಿದೆ. ಆ ಪ್ರಕರಣದಲ್ಲಿ ನಾನು ಪ್ರತಿವಾದಿ ಆಗದೆ ಇರುವ ಕಾರಣ ನನ್ನ ಅಭಿಪ್ರಾಯ ಮಂಡಿಸಲು ಸಾಧ್ಯವಾಗಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆಯ ಮೂಲ ಆಶಯ ಈಡೇರಬೇಕಾದರೆ, ಶಾಸಕಾಂಗ ಪಕ್ಷದ ನಾಯಕರಿಗೆ ತಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡಲು ಅವಕಾಶ ಇರಲೇಬೇಕೆಂದು ಅವರು ಪ್ರತಿಪಾದಿಸಿದರು.

ತನ್ನ ಶಾಸಕರಿಗೆ ವಿಪ್ ನೀಡುವ ಹಕ್ಕು ಸೇರಿದಂತೆ ಶಾಸಕಾಂಗ ಪಕ್ಷದ ನಾಯಕನ ಅಧಿಕಾರಕ್ಕೆ ರಕ್ಷಣೆ ನೀಡಬೇಕು. ಈ ಬಗ್ಗೆ ಸ್ಪೀಕರ್ ಸ್ಪಷ್ಟಣೆ ನೀಡಬೇಕು ಎಂದು ಆಗ್ರಹಿಸಿದ ಸಿದ್ದರಾಮಯ್ಯ, ಈ ಸಂಬಂಧದ ಗೊಂದಲ ಇತ್ಯರ್ಥ ಆಗುವವರೆಗೂ ವಿಶ್ವಾಸಮತ ಯಾಚನೆ ಮುಂದೂಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಧ್ವನಿಗೂಡಿಸಿದ ಸಚಿವ ಕೃಷ್ಣಭೈರೇಗೌಡ ಹಾಗೂ ಹಿರಿಯ ಸದಸ್ಯ ಎಚ್.ಕೆ.ಪಾಟೀಲ್, ರಾಜೀನಾಮೆ ನೀಡಿರುವ 15 ಮಂದಿ ಶಾಸಕರು ಈ ಸದನದ ಸದಸ್ಯರು ಹೌದೋ, ಅಲ್ಲವೋ ಎಂಬುದು ತೀರ್ಮಾನ ಆಗಬೇಕಿದೆ. ಅದಕ್ಕೂ ಮೊದಲೇ ವಿಶ್ವಾಸಮತ ಯಾಚನೆ ಸರಿಯಾದ ಕ್ರಮ ಅಲ್ಲ. ಒಮ್ಮೆ ಪ್ರಮಾಣ ವಚನ ಸ್ವೀಕರಿಸಿದರೆ ಅವರು ಈ ಮನೆ ಸದಸ್ಯರಾಗಿರುತ್ತಾರೆ. ಒಂದು ವೇಳೆ ಆತ ರಾಜೀನಾಮೆ ನೀಡಿದರೆ ಅದು ಅಂಗೀಕಾರ ಆಗಬೇಕು. ಅದು ಆಗದೆ ಮೂರನೇ ಆಯಾಮದಲ್ಲಿಟ್ಟು ಕಲಾಪದಲ್ಲಿ ವಿಶ್ವಾಸಮತ ಯಾಚನೆ ಸಲ್ಲ ಎಂದು ಆಕ್ಷೇಪಿಸಿದರು.

15 ಮಂದಿ ಸದಸ್ಯರ ಬಗ್ಗೆ ತೀರ್ಮಾನ ಆಗದೆ ವಿಶ್ವಾಸಮತಕ್ಕೆ ಹಾಕುವುದು ಸದನ ಅಪೂರ್ಣ ಅಥವಾ ತ್ರಿಶಂಕು ಸ್ಥಿತಿಯ ತೀರ್ಮಾನ ಆಗುತ್ತದೆ. ಸದನದ ಸಿಂಧುತ್ವದ ಲೋಪವೂ ಆಗುಲಿದೆ. ಆದುದರಿಂದ ಈ ಬಗ್ಗೆ ಅಂತಿಮ ತೀರ್ಮಾನ ಆದ ಬಳಿಕವೇ ವಿಶ್ವಾಸಮತ ಮುಂದೂಡಬೇಕು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News