‘ವಿಪ್’ ಹೇಳಿಕೆ ಹಿಂಪಡೆದ ವಿಪಕ್ಷ ನಾಯಕ ಯಡಿಯೂರಪ್ಪ

Update: 2019-07-18 15:10 GMT

ಬೆಂಗಳೂರು, ಜು. 18: ಅತೃಪ್ತ ಶಾಸಕರ ರಾಜೀನಾಮೆ ಸಂಬಂಧ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ಉಲ್ಲೇಖಿಸಿದ ವಿಪಕ್ಷ ನಾಯಕ ಯಡಿಯೂರಪ್ಪ, ‘ವಿಪ್’ ಜಾರಿ ಮಾಡುವಂತಿಲ್ಲವೆಂದು ಹೇಳಿದೆ ಎಂದಿದ್ದು, ಇದಕ್ಕೆ ಆಡಳಿತ ಪಕ್ಷದ ಸದಸ್ಯರು ವಿರೋಧಿಸಿದ ಹಿನ್ನೆಲೆಯಲ್ಲಿ ತನ್ನ ಹೇಳಿಕೆ ಹಿಂಪಡೆದ ಪ್ರಸಂಗ ನಡೆಯಿತು.

ಗುರುವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕ್ರಿಯಾಲೋಪ ಎತ್ತಿ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಯಡಿಯೂರಪ್ಪ, ಅತೃಪ್ತ ಶಾಸಕರಿಗೆ ವಿಪ್ ಜಾರಿ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ ಎಂದು ಉಲ್ಲೇಖಿಸಿದರು. ಇದಕ್ಕೆ ತೀವ್ರ ಆಕ್ಷೇಪವೆತ್ತಿದ ಸಚಿವ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕರು ಸದನ ಮತ್ತು ದೇಶದ ಜನರನ್ನು ದಾರಿ ತಪ್ಪಿಸುವ ಮೂಲಕ ಸುಪ್ರೀಂ ಕೋರ್ಟ್ ತೀರ್ಪಿಗೆ ಅವಮಾನ ಮಾಡುತ್ತಿದ್ದಾರೆ. ವಿಪ್ ಬಗ್ಗೆ ಕೋರ್ಟ್ ಎಲ್ಲಿಯೂ ಉಲ್ಲೇಖ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಕೆಲಕಾಲ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಅಲ್ಲದೆ ಕಾವೇರಿದ ವಾತಾವರಣ ಸೃಷ್ಟಿಯಾಯಿತು. ಮತ್ತೆ ಎದ್ದು ನಿಂತ ಬಿಎಸ್‌ವೈ, ನನ್ನ ಹೇಳಿಕೆಯನ್ನು ನಾನು ಹಿಂಪಡೆಯುತ್ತೇನೆ ಎಂದು ವಿವಾದಕ್ಕೆ ತೆರೆ ಎಳೆದರು.

ಜಾರಿ ಯಾರು ಮಾಡಬೇಕು: ಶಾಸಕರ ರಾಜೀನಾಮೆ ವಿಚಾರದಲ್ಲಿ ನಾನು ಪ್ರತಿವಾದಿ. ‘ವಿಪ್’ ಬಗ್ಗೆ ಸುಪ್ರೀಂ ಕೋರ್ಟ್ ಯಾರು ಜಾರಿ ಮಾಡಬೇಕೆಂದು ಹೇಳಿಲ್ಲ. ನನ್ನ ಕಷ್ಟ ನನಗೆ ಗೊತ್ತು. ಸದನ ಆರಂಭದ ಬಗ್ಗೆ ಆಹ್ವಾನ ಕಳುಹಿಸುವೆ. ವಿಪ್ ಜಾರಿ ನನ್ನ ಕರ್ತವ್ಯವಲ್ಲ’ ಎಂದು ಸ್ಪೀಕರ್ ರಮೇಶ್‌ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News