ವಿಧಾನ ಪರಿಷತ್ ಕಲಾಪ ಆರೋಪ-ಪ್ರತ್ಯಾರೋಪದಲ್ಲೇ ಮುಂದೂಡಿಕೆ

Update: 2019-07-18 15:14 GMT
ಫೈಲ್ ಚಿತ್ರ

ಬೆಂಗಳೂರು, ಜು.18: ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ಧರಣಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಮೈತ್ರಿ ಪಕ್ಷದ ಸದಸ್ಯರು ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಗುರುವಾರ ಬೆಳಗ್ಗೆ ಕೇವಲ ನಾಲ್ಕು ನಿಮಿಷ ನಡೆದ ವಿಧಾನಪರಿಷತ್ ಕಲಾಪವು, ಮೈತ್ರಿ ಸರಕಾರದ ವಿರುದ್ಧ ಬಿಜೆಪಿ ಸದಸ್ಯರು ಕಳೆದ ಮೂರು ದಿನದಿಂದ ನಡೆಸುತ್ತಿರುವ ಧರಣಿ ಇಂದೂ ಮುಂದುವರೆಸಿದರು. ಭಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ಮೈತ್ರಿ ಸರಕಾರಕ್ಕೆ ಬಹುಮತ ಇಲ್ಲವಾಗಿದೆ. ಹೀಗಾಗಿ ಕೂಡಲೆ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಬಿಜೆಪಿಯ ಧರಣಿಗೆ ಪ್ರತಿಯಾಗಿ ಮೈತ್ರಿ ಸದಸ್ಯರು, ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಬಲವಂತವಾಗಿ ಮುಂಬೈನ ಹೋಟೆಲ್‌ನಲ್ಲಿ ಕೂಡಿ ಹಾಕಿದ್ದಾರೆ. ಬಿಜೆಪಿ ನಾಯಕರ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ನೀತಿಗೆ ಧಿಕ್ಕಾರವೆಂದು ಕೂಗಿ ಪ್ರತಿಭಟಿಸಿದರು.

ಹೀಗೆ ಆಡಳಿತ ಹಾಗೂ ವಿಪಕ್ಷ ಸದಸ್ಯರು ಪರಸ್ಪರ ವಾಗ್ವಾದದಲ್ಲಿ ಇರುವಾಗಲೆ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ, ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಚರ್ಚೆ ಆರಂಭವಾಗಿರುವುದರಿಂದ ಆಡಳಿತ ಪಕ್ಷದ ಸಚಿವರು ಪರಿಷತ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿ, ಪರಿಷತ್ ಕಲಾಪವನ್ನು ಮಧ್ಯಾಹ್ನ 3.30ರವರೆಗೆ ಮುಂದೂಡಿದರು.

ಮಧ್ಯಾಹ್ನದ ಕಲಾಪವು ಆಡಳಿತ ಹಾಗೂ ಬಿಜೆಪಿ ಸದಸ್ಯರ ಗಲಾಟೆ, ವಾದ-ವಿವಾದಗಳಿಂದ ತುಂಬಿತ್ತು. ಸಭಾಪತಿ ಪ್ರತಾಪ್‌ಚಂದ್ರಶೆಟ್ಟಿ ಪುನಃ ಕಲಾಪವನ್ನು ನಾಳೆಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News