ಬಿಜೆಪಿಯಿಂದ ಶಾಸಕ ಶ್ರೀಮಂತ ಪಾಟೀಲ್ ಅಪಹರಣ ಆರೋಪ: ಕಾಂಗ್ರೆಸ್-ಜೆಡಿಎಸ್ ಸದಸ್ಯರಿಂದ ಗದ್ದಲ

Update: 2019-07-18 16:43 GMT

ಬೆಂಗಳೂರು, ಜು.18: ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್‌ರನ್ನು ಬಿಜೆಪಿಯವರು ಅಪಹರಣ ಮಾಡಿ, ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು, ಪ್ರತಿಪಕ್ಷ ಬಿಜೆಪಿ ವಿರುದ್ಧ ಗುರುವಾರ ವಿಧಾನಸಭೆಯಲ್ಲಿ ಘೋಷಣೆಗಳನ್ನು ಕೂಗಿ ಗದ್ದಲವೆಬ್ಬಿಸಿದರು.

ಭೋಜನ ವಿರಾಮದ ನಂತರ ಸದನ ಸಮಾವೇಶಗೊಂಡಾಗ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ರನ್ನು ಮುಂಬೈಯಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬಲವಂತದಿಂದ ಭರ್ತಿ ಮಾಡಲಾಗಿದೆ. ನಮ್ಮ ಶಾಸಕರನ್ನು ಯಾರು ಜೊತೆಯಲ್ಲಿ ಕರೆದುಕೊಂಡು ಹೋದರು, ಎಲ್ಲ ದಾಖಲೆಗಳನ್ನು ನೀಡುತ್ತೇನೆ ಎಂದರು. ಲಕ್ಷ್ಮಣ ಸವದಿ ಎಂಬವರು ಶ್ರೀಮಂತಪಾಟೀಲ್‌ರನ್ನು ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಮಲಗಿರುವ ರೀತಿ ಫೋಟೋ ತೆಗೆದು ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದರು.

ಈ ವೇಳೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ವಿಶ್ವಾಸಮತ ನಿರ್ಣಯಕ್ಕೂ ಇದಕ್ಕೂ ಏನು ಸಂಬಂಧ ಎಂದರು. ನಮ್ಮ ಶಾಸಕರ ಅಪಹರಣವಾಗುತ್ತಿದೆ ನಾನು ಸಭಾಧ್ಯಕ್ಷರ ಬಳಿ ರಕ್ಷಣೆ ಕೋರುತ್ತಿದ್ದೇನೆ. ಇದು ನಮ್ಮ ಪಕ್ಷ, ನಮ್ಮ ಶಾಸಕರಿಗೆ ಸಂಬಂಧಪಟ್ಟ ವಿಷಯ ಎಂದು ಶಿವಕುಮಾರ್ ತಿರುಗೇಟು ನೀಡಿದರು.

ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಮಾತನಾಡಿ, ಕೊಠಡಿಯಲ್ಲಿ ಇದ್ದ ಶಾಸಕರನ್ನು ಅಪಹರಣ ಮಾಡಲಾಗಿದೆ. ದನಗಳ ವ್ಯಾಪಾರದಂತೆ ಶಾಸಕರ ಖರೀದಿ ನಡೆಯುತ್ತಿದೆ. ಕೇವಲ ಒಂದು ಕುರ್ಚಿಗಾಗಿ ಎನೆಲ್ಲಾ ನಡೆಯುತ್ತಿದೆ. ಶ್ರೀಮಂತ ಪಾಟೀಲ್ ರನ್ನು ಕರೆದುಕೊಂಡು ಹೋಗಿರುವ ಲಕ್ಷ್ಮಣ ಸವದಿ ಯಾರು? ಅವರು ಬಿಜೆಪಿಯ ಮಾಜಿ ಸಚಿವರಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ರಕ್ಷಣೆಗೆ ಸ್ಪೀಕರ್ ಧಾವಿಸದಿದ್ದರೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತದೆ. ಮಾನ ಮರ್ಯಾದೆ ಇಟ್ಟುಕೊಂಡು ಶಾಸಕರಾಗಲು ಸಾಧ್ಯವೇ ಎಂಬ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಶ್ರೀಮಂತ ಪಾಟೀಲ್ ನಿನ್ನೆ ನಮ್ಮ ಜೊತೆ ಇದ್ದರು. ಆರೋಗ್ಯವಾಗಿದ್ದರು. ನಿನ್ನೆ ರಾತ್ರಿ ಅವರು ರೆಸಾರ್ಟ್‌ನಿಂದ ನಾಪತ್ತೆಯಾಗಿರುವ ಸುದ್ದಿ ತಿಳಿಯಿತು. ನಾವು ಹುಡುಕಿದರು ಅವರ ಯಾವ ಮಾಹಿತಿಯೂ ಸಿಕ್ಕಿಲ್ಲ. ಆದರೆ, ಈಗ ಬಿಜೆಪಿಯವರು ಏನು ಗೊತ್ತಿಲ್ಲದವರಂತೆ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಶ್ರೀಮಂತ ಪಾಟೀಲ್ ಆಸ್ಪತ್ರೆಯಲ್ಲಿರುವ ಫೋಟೊಗಳು, ಖಾಸಗಿ ವಿಮಾನದ ಮೂಲಕ ತೆರಳಿರುವ ಟಿಕೆಟ್‌ನ ಪ್ರತಿಗಳನ್ನು ಪ್ರದರ್ಶಿಸಿ, ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಆಗ ಮಾತು ಮುಂದುವರೆಸಿದ ದಿನೇಶ್ ಗುಂಡೂರಾವ್, ನಾನು ಸುಮ್ಮನೆ ಆರೋಪ ಮಾಡುತ್ತಿಲ್ಲ. ದಾಖಲೆ ಸಮೇತ ಸಾಬೀತು ಪಡಿಸುತ್ತೇನೆ. ಈ ರೀತಿ ಶಾಸಕರ ಅಪಹರಣ ಸರಿಯಲ್ಲ. ಇದು ಸದನದ ಗೌರವದ ಪ್ರಶ್ನೆ. ಶ್ರೀಮಂತ ಪಾಟೀಲ್‌ರನ್ನು ರಾತ್ರಿ ಚೆನ್ನೈಗೆ ಕರೆದುಕೊಂಡು ಹೋಗಿ, ಅಲ್ಲಿಂದ ಇಂದು ಬೆಳಗ್ಗೆ ಮುಂಬೈಗೆ ಕರೆದುಕೊಂಡು ಹೋಗಲಾಗಿದೆ. ಅನಾರೋಗ್ಯ ಇರುವವರು ಯಾರಾದರೂ ಈ ರೀತಿ ಪ್ರಯಾಣ ಮಾಡಲು ಸಾಧ್ಯವೇ? ಮಹಾರಾಷ್ಟ್ರ ಸರಕಾರ ಅವರಿಗೆ ರಕ್ಷಣೆ ನೀಡುತ್ತಿದೆ. ಇದರಲ್ಲಿ ಬಿಜೆಪಿ ಹಸ್ತಕ್ಷೇಪವಿದೆ ಎಂದು ದೂರಿದರು.

ಶ್ರೀಮಂತ ಪಾಟೀಲ್‌ರನ್ನು ಯಾರು ಕರೆದುಕೊಂಡು ಹೋಗಿದ್ದಾರೆ? ಅನಾರೋಗ್ಯದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದಾರಾ? ವಿಪ್ ಉಲ್ಲಂಘಿಸಲು ನಡೆಯುತ್ತಿರುವ ಷಡ್ಯಂತ್ರವೇ? ಎಂಬುದರ ಕುರಿತು ಗೃಹ ಇಲಾಖೆಯಿಂದ ತನಿಖೆ ನಡೆಸುವಂತೆ ದಿನೇಶ್ ಗುಂಡೂರಾವ್ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಸ್ಪೀಕರ್, ಗೃಹ ಸಚಿವ ಎಂ.ಬಿ.ಪಾಟೀಲ್‌ರನ್ನು ಉದ್ದೇಶಿಸಿ ಶ್ರೀಮಂತ ಪಾಟೀಲ್ ಕುಟುಂಬವನ್ನು ಸಂಪರ್ಕಿಸಿ, ಈ ವಿಚಾರದ ಬಗ್ಗೆ ಮಾಹಿತಿ ಪಡೆದು ನನಗೆ ಶುಕ್ರವಾರ ಸದನದಲ್ಲಿ ವರದಿ ಒಪ್ಪಿಸುವಂತೆ ಸೂಚಿಸಿದರು. ಇಲ್ಲದಿದ್ದರೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಕರೆದು ನಾನೇ ಅವರಿಗೆ ನಿರ್ದೇಶನ ನೀಡಬೇಕಾಗುತ್ತದೆ ಎಂದರು.

ಶ್ರೀಮಂತ ಪಾಟೀಲ್ ಹೆಸರಿನಲ್ಲಿ ನನಗೆ ಇವತ್ತು ಬೆಳಗ್ಗೆ ಒಂದು ಪತ್ರ ಬಂದಿದ್ದು, ಅದರಲ್ಲಿ ಈ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ. ಶಾಸಕರ ಲೆಟರ್‌ಹೆಡ್ ಇಲ್ಲ, ದಿನಾಂಕ ಇಲ್ಲ, ಸ್ಥಳ ನಮೂದಿಸಿಲ್ಲ. ಸ್ಪೀಕರ್‌ಗೆ ಒಂದು ಪತ್ರ ಕಳುಹಿಸಬೇಕಾದರೆ ಅನುಸರಿಸಬೇಕಾದ ವಿಧಾನವನ್ನು ಅನುಸರಿಸಿಲ್ಲ. ಈ ಪತ್ರದ ಸತ್ಯಾಸತ್ಯತೆಯನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎಂದು ಅವರು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News