ಗೋವಾ ಸರಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಸರಿಯಲ್ಲ: ಎನ್.ಎಚ್.ಕೋನರಡ್ಡಿ

Update: 2019-07-18 17:27 GMT

ಬೆಂಗಳೂರು, ಜು.18: ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ಹರಿಸುವಂತೆ ತೀರ್ಪು ನೀಡಿರುವ ಮಹಾದಾಯಿ ನ್ಯಾಯಾಧೀಕರಣ ತೀರ್ಪನ್ನು ಪ್ರಶ್ನಿಸಿ ಗೋವಾ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ದಾವೆ ಹೂಡಲು ಮುಂದಾಗಿರುವುದು ಸರಿಯಾದ ಬೆಳವಣಿಗೆ ಅಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾದಾಯಿ ನ್ಯಾಯಾಧೀಕರಣವು ಮಹದಾಯಿ ನದಿಯಿಂದ ಕರ್ನಾಟಕಕ್ಕೆ 13.42 ಟಿಎಂಸಿ ಹರಿಸುವಂತೆ ಕೇರಳ ಸರಕಾರಕ್ಕೆ ಸೂಚಿಸಿದೆ. ಆದರೆ, ಗೋವಾ ಸರಕಾರದ ಮುಖ್ಯಮಂತ್ರಿ ಪ್ರಮೋದ ಸಾವಂತ್ ಈ ತೀರ್ಪಿನ ವಿರುದ್ಧ ಜುಲೈ 19ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಗೋವಾ ಸರಕಾರದ ಈ ಕ್ರಮದಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಹಾದಾಯಿ ನ್ಯಾಯಾಧೀಕರಣ ತೀರ್ಪಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಈವರೆಗೆ ಈ ಕುರಿತು ಒಂದು ಸಣ್ಣ ಅಧಿಸೂಚನೆ ಹೊರಡಿಸದೆ ಕಾಲಹರಣ ಮಾಡುತ್ತಿರುವುದು ನಾಚಿಕೇಗೇಡಿನ ಸಂಗತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಉತ್ ಶಾ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರು ಚುನಾವಣೆ ಮುನ್ನ ನೀಡಿದ ಭರವಸೆಗಳು ಇಂದು ಹುಸಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಹದಾಯಿ ಕಳಸಾ-ಬಂಡೂರಿ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಹದಿನೈದಕ್ಕೂ ಹೆಚ್ಚಿನ ತಾಲೂಕಿನ ನೂರಾರು ಹಳ್ಳಿಗಳ ಲಕ್ಷಾಂತರ ರೈತರ ಆಶಾಕಿರಣವಾಗಿದೆ. 200 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರಿದರೂ ಗೋವಾ ರಾಜ್ಯಕ್ಕೆ ಎಳ್ಳಷ್ಟು ಉಪಯೋಗವಿಲ್ಲ. ಅದೇ ನೀರನ್ನು ಕುಡಿಯಲು ಉಪಯೋಗಿಸಲು ನ್ಯಾಯಾಧೀಕರಣ ರಾಜ್ಯಕ್ಕೆ 13.42 ಟಿಎಂಸಿ ಹರಿಸುವಂತೆ ಸೂಚಿಸಿದೆ. ಈ ಬಗ್ಗೆ ರಾಜ್ಯದ ಬಿಜೆಪಿ ಸಂಸದರು ಕೇಂದ್ರಕ್ಕೆ ಮೇಲೆ ಒತ್ತಡ ತಂದು ರಾಜ್ಯದ ಪಾಲಿನ ನೀರನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆಂದು ಅವರು ಖಂಡಿಸಿದರು.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸದಾನಂದ ಗೌಡ ಹಾಗೂ ಕೇಂದ್ರದ ರಾಜ್ಯ ಸಚಿವ ಸುರೇಶ ಅಂಗಡಿ ಮಹಾದಾಯಿ ನ್ಯಾಯಾಧೀಕರಣ ತೀರ್ಪಿನ ವಿಷಯವಾಗಿ ವಿಶೇಷ ಮುತುವರ್ಜಿ ವಹಿಸಿ ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಇಲ್ಲದಿದ್ದರೆ ಜು.21ರಂದು ನವಲಗುಂದ ನರಗುಂದದಲ್ಲಿ ನಡೆಯುವ ರೈತ ಹುತಾತ್ಮ ದಿನಾಚರಣೆ ಸಂದರ್ಭದಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ನಿರ್ಧರಿಸಬೇಕಾಗುತ್ತದೆ.

-ಎನ್.ಹೆಚ್. ಕೋನರಡ್ಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News