‘ನಾನು ವಿರೋಧ ಪಕ್ಷದ ನಾಯಕ’: ಸಿದ್ದರಾಮಯ್ಯ ಮಾತಿಗೆ ಬಿಜೆಪಿ ಸದಸ್ಯರ ಗೇಲಿ

Update: 2019-07-18 17:35 GMT

ಬೆಂಗಳೂರು, ಜು. 18: ‘ನಾನು ವಿರೋಧ ಪಕ್ಷದ ನಾಯಕ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಬಾಯಿತಪ್ಪಿ ಮಾತನಾಡಿದ್ದು, ಬಿಜೆಪಿ ಸದಸ್ಯರ ಗೇಲಿಗೆ ಆಹಾರವಾದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಗುರುವಾರ ವಿಧಾನಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಪ್ರಸ್ತಾವಕ್ಕೆ ಮಧ್ಯಪ್ರವೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಮಾತಿನ ಭರಾಟೆಯಲ್ಲಿ ‘ನಾನು ವಿಪಕ್ಷ ನಾಯಕ’ ಎಂದರು. ಇದರಿಂದ ಸದನವೇ ಕ್ಷಣಕಾಲ ಬೆರಗುಗೊಂಡಿತ್ತು. ಆದರೆ, ಬಿಜೆಪಿ ಸದಸ್ಯರು ಅಚ್ಚರಿ ವ್ಯಕ್ತಪಡಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ‘ಏನ್ರೀ.. (ಬಿಜೆಪಿ ಸದಸ್ಯರ ಕುರಿತು) ಖುಷಿಯಲ್ಲಿ ತೇಲಾಡುತ್ತಿದ್ದೀರಿ. ಈ ಹಿಂದೆ ನಾನು 4 ವರ್ಷಗಳ ಕಾಲ ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೇನೆ. ಆದರೆ, ಬಿಜೆಪಿಯವರು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದಂತೆ ಅಧಿಕಾರಕ್ಕಾಗಿ ಬಹಳ ಆತುರದಲ್ಲಿ ಇದ್ದಾರೆ’ ಎಂದು ಕಾಲೆಳೆದರು.

ಇದಕ್ಕೆ ಧ್ವನಿಗೂಡಿಸುವ ರೀತಿಯಲ್ಲಿ ಸ್ಪೀಕರ್ ರಮೇಶ್‌ಕುಮಾರ್, ‘ನಿಮಗೇನೋ ಖುಷಿ ನನ್ನ ಕಷ್ಟ ಕೇಳಿ. ಮಾಜಿ ಮುಖ್ಯಮಂತ್ರಿ, ಹಾಲಿ ಮುಖ್ಯಮಂತ್ರಿ ಹಾಗೂ ಭಾವೀ ಮುಖ್ಯಮಂತ್ರಿಗಳ ಮಧ್ಯೆ ನಾನು ಕೆಲಸ ಮಾಡಬೇಕಿದೆ’ ಎಂದು ತಮ್ಮ ಆಳಲು ತೊಡಿಕೊಂಡರು.

ಪುನಃ ತಮ್ಮ ಮಾತು ಆರಂಭಿಸಿದ ಸಿದ್ದರಾಮಯ್ಯ, ನೀವು(ಸ್ಪೀಕರ್ ಕುರಿತು) ಎರಡನೆ ಬಾರಿ ವಿಧಾನಸಭೆ ಸ್ಪೀಕರ್ ಆಗಿದ್ದೀರಿ, ಇಂತಹವುಗಳನ್ನೆಲ್ಲ ತಡೆದುಕೊಳ್ಳಬೇಕು. ಆ ತಾಳ್ಮೆ ಮತ್ತು ಸಹನಾಶಕ್ತಿ ನಿಮ್ಮಲ್ಲಿ ಇದೆ ಎಂಬುದು ನನ್ನ ಭಾವನೆ ಎಂದು ಮೆಚ್ಚುಗೆ ಮಾತುಗಳನ್ನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News