ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ: ರಾಮಲಿಂಗಾರೆಡ್ಡಿ

Update: 2019-07-18 17:55 GMT

ಬೆಂಗಳೂರು, ಜು.18: ರಾಜ್ಯದಲ್ಲಿ ಉತ್ತಮ ಕ್ರೀಡಾಪಟುಗಳಿದ್ದರೂ, ಅವರಿಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ. ಓದಿನೊಂದಿಗೆ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡಲು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಶಾಸಕ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಫಿಸಿಕಲ್ ಎಜುಕೇಷನ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕೌನ್ಸಲರ್ ಕಪ್-2019ರ ಮಕ್ಕಳ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಗೆ ಪ್ರೋತ್ಸಾಹ ನೀಡುವ ಮೂಲಕ ನಮ್ಮ ಯುವ ಜನತೆ ರಾಷ್ಟ್ರ-ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತಾಗಬೇಕೆಂದು ತಿಳಿಸಿದರು.

ಶಾಸಕಿ ಆರ್.ಸೌಮ್ಯಾರೆಡ್ಡಿ ಮಾತನಾಡಿ, ಶಿಕ್ಷಣಕ್ಕೆ ನಾವು ಮಹತ್ವ ನೀಡುವಷ್ಟು ಕ್ರೀಡೆಗೂ ನೀಡಬೇಕು. ಕೇವಲ ಕ್ರೀಡಾಪಟುಗಳಾಗಲು ಮಾತ್ರವಲ್ಲ, ನಾವು ಉತ್ತಮ ಆರೋಗ್ಯ ಕಾಪಾಡಲು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಕೊಳ್ಳುವುದು ಅತ್ಯವಶ್ಯಕ. ಕ್ರೀಡೆಗಾಗಿ ರಾಜ್ಯ ಸರಕಾರ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ಹೆಚ್ಚಿನ ನೆರವನ್ನೂ ನೀಡುತ್ತಿದೆ ಎಂದು ಹೇಳಿದರು.

ಪಂದ್ಯಾವಳಿಯ ಆಯೋಜಕ ಎನ್.ನಾಗರಾಜ್ ಮಾತನಾಡಿ, 7ನೆ ರಾಜ್ಯಮಟ್ಟದ ಅಂತರ್‌ಶಾಲಾ ವಾಲಿಬಾಲ್ ಪಂದ್ಯಾವಳಿ ಜು.18, 19, 20ರಂದು ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನಲ್ಲಿ ನಡೆಯುತ್ತಿದೆ. 2ಸಾವಿರ ಸೇರುವ ಈ ಪಂದ್ಯಾವಳಿ ವೀಕ್ಷಿಸಲು ಬರುವವರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಸುಲಭವಾಗಿ ಪ್ರತಿಯೊಬ್ಬರೂ ಈ ಕಾರ್ಯಕ್ರಮವನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಪಾಲಿಕೆ ಸದಸ್ಯರು ಹಾಗೂ ಪಂದ್ಯಾವಳಿಯ ಆಯೋಜಕ ಎನ್.ನಾಗರಾಜ್, ಬೆಂಗಳೂರು ಇಂಟೆಲ್ ಶಾಲೆಯ ಸಂಸ್ಥಾಪಕ ಮುನಿರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News