ವಿಕಲಚೇತನ ಮಗುವಿನ ಕೊಲೆ ಪ್ರಕರಣ: ತಂದೆ ಸೇರಿ ಇಬ್ಬರ ಬಂಧನ

Update: 2019-07-18 18:10 GMT

ಬೆಂಗಳೂರು, ಜು.18: ತಂದೆ, ರೌಡಿಶೀಟರ್ ಸೇರಿಕೊಂಡು ಐದು ವರ್ಷದ ಮಗುವನ್ನು ಕತ್ತು ಹಿಸುಕಿ ಕೊಲೆಗೈದಿರುವ ಪ್ರಕರಣವನ್ನು ಭೇದಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜಾಜಿನಗರದ ರೌಡಿಶೀಟರ್ ಮಹೇಶ್(37) ಹಾಗೂ ಮೃತ ಮಗುವಿನ ತಂದೆ ದಾವಣಗೆರೆ ನಿವಾಸಿ ಜಯಪ್ಪ ಎಂಬುವರು ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ರೌಡಿ ಪಟ್ಟಿಯಲ್ಲಿರುವ ಮತ್ತು ಅಪರಾಧ ಹಿನ್ನೆಲೆಯುಳ್ಳವರ (ಎಂಓಬಿ) ಮೇಲೆ ತೀವ್ರ ನಿಗಾವಹಿಸುವಂತೆ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದು, ಅದರಂತೆ ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸ್ ಇನ್‌ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯ ಮತ್ತು ಸಿಬ್ಬಂದಿ ಮಾಗಡಿ ರೋಡ್ ಪೊಲೀಸ್ ಠಾಣೆ ಎಂಓಬಿಯಾದ ಮಹೇಶ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಮಗು ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ಆರೋಪಿ ಮಹೇಶ್ ಮಾಗಡಿ ರೋಡ್ ಪೊಲೀಸ್ ಠಾಣೆ ರೌಡಿಶೀಟರ್ ಆಗಿದ್ದು, ಈತನು ಆಟೊ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಈತನಿಗೆ ಒಂದು ತಿಂಗಳ ಹಿಂದೆ ಗಾರೆ ಕೆಲಸ ಮಾಡುವ ಜಯಪ್ಪನ ಪರಿಚಯವಾಗಿದೆ. ಮಹೇಶ್ ಜತೆ ಮಾತನಾಡುತ್ತಾ ತನಗೆ 4 ಜನ ಮಕ್ಕಳು, ಅದರಲ್ಲಿ 3ನೆಯ ಮಗು ಬಸವರಾಜು ವಿಶಿಷ್ಟಚೇತನನಾಗಿದ್ದು, ಮಾತನಾಡಲು ಮತ್ತು ನಡೆದಾಡಲು ಬರುವುದಿಲ್ಲ. ಆ ಮಗುವಿನ ಚಿಕಿತ್ಸೆಗಾಗಿ ನಿಮಾನ್ಸ್ ಮತ್ತು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಬಸವರಾಜನಿಗೆ ಗುಣ ಹೊಂದಿರುವುದಿಲ್ಲ. ಬಸವರಾಜನಿಗಾಗಿ ಸುಮಾರು ಹಣ ಖರ್ಚು ಮಾಡಿದ್ದು, ಇನ್ನುಮುಂದೆ ಈ ಮಗುವಿಗೆ ಚಿಕಿತ್ಸೆ ಕೊಡಿಸಲು ನನ್ನ ಬಳಿ ಹಣ ಇರುವುದಿಲ್ಲ ಏನಾದರೂ ಮಾಡಬೇಕು ಎಂದು ಆರೋಪಿ ಮಹೇಶ್‌ಗೆ ತಿಳಿಸಿದ್ದಾನೆ.

ಆರೋಪಿ ಮಹೇಶ್ ಈತನು ಆ ಮಗುವನ್ನು ಇಂಜೆಕ್ಷನ್ ಕೊಟ್ಟು ಸಾಯಿಸಿ ಬಿಡುತ್ತೇನೆಂದು ತಿಳಿಸಿದ್ದಾನೆ. ಆ ಕೆಲಸಕ್ಕೆ 50 ಸಾವಿರ ರೂ. ಹಣ ನೀಡುವಂತೆ ಕೇಳಿದ್ದ. ಅದಕ್ಕೆ ಜಯಪ್ಪ ಆರೋಪಿ ಮಹೇಶ್‌ಗೆ ಕೆಲಸ ಮುಗಿಸಿದ ಮೇಲೆ ಹಣ ನೀಡುವುದಾಗಿ ತಿಳಿಸಿದ್ದ. ಅದರಂತೆ ಆರೋಪಿ ಮಹೇಶ್, ಬಸವರಾಜುನನ್ನು ಅವರ ಮನೆಯಲ್ಲಿಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಜಯಪ್ಪ ಮಗುವನ್ನು ಗೊರಗುಂಟೆ ಪಾಳ್ಯದಲ್ಲಿರುವ ಸ್ಮಶಾನದಲ್ಲಿ ಶವಸಂಸ್ಕಾರ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News