ಸುಪ್ರೀಂ ಕೋರ್ಟ್‌ನಿಂದ ಛೀಮಾರಿಗೆ ಒಳಗಾದವರಿಂದ ಉಪದೇಶ ಬೇಕಿಲ್ಲ: ಸಚಿವ ಡಿಕೆಶಿ

Update: 2019-07-18 18:26 GMT

ಬೆಂಗಳೂರು, ಜು. 18: ‘ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿ ಸುಪ್ರೀಂ ಕೋರ್ಟ್‌ನಿಂದ ಛೀಮಾರಿಗೆ ಒಳಗಾದವರಿಂದ ಈ ಸದನಕ್ಕೆ ಉಪದೇಶ ಬೇಕಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದು, ವಿಪಕ್ಷ ಬಿಜೆಪಿ ಸದಸ್ಯರನ್ನು ಕೆರಳಿಸಿತು.

ಗುರುವಾರ ವಿಧಾನಸಭೆಯಲ್ಲಿ ಸಿಎಂ ವಿಶ್ವಾಸಮತ ಯಾಚನೆ ವೇಳೆ ಸಿದ್ದರಾಮಯ್ಯ ಎತ್ತಿದ ಕ್ರಿಯಾಲೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಕೆ.ಜಿ.ಬೋಪಯ್ಯ, ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಸದನದಲ್ಲಿ ಕ್ರಿಯಾಲೋಪ ಎತ್ತಿದರೆ ಹೇಗೆ ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಡಿ.ಕೆ.ಶಿವಕುಮಾರ್, ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿ ಕೋರ್ಟ್‌ನಿಂದ ಛೀಮಾರಿಗೆ ಒಳಗಾಗಿದ್ದೀರಿ. ವೆಂಕಟರಮಣಪ್ಪ, ಗೂಳಿಹಟ್ಟಿ ಶೇಖರ್, ಶಿವನಗೌಡ ನಾಯಕ್ ಸೇರಿದಂತೆ ಎಲ್ಲರೂ ಇಲ್ಲೇ ಇದ್ದಾರೆ ಎಂದು ಉದಾಹರಣೆ ನೀಡಿದರು.

ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪಿಸಿದರಲ್ಲದೆ, ಆಡಳಿತ-ವಿಪಕ್ಷ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಈ ವೇಳೆ ಎದ್ದುನಿಂತ ಸಚಿವ ವೆಂಕಟರಮಣಪ್ಪ, ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿ ಸುಪ್ರೀಂ ಕೋರ್ಟ್‌ನಿಂದ ಛೀಮಾರಿಗೆ ಒಳಗಾದವರು ನೀವು ಎಂದು ಬೋಪಯ್ಯ ಅವರನ್ನು ಮಾತಿನ ಈಟಿಯಿಂದ ತಿವಿದರು. ಈ ವೇಳೆ ಕೆಲ ಸದಸ್ಯರು ಎದ್ದುನಿಂತು ತಮ್ಮ-ತಮ್ಮಲ್ಲೆ ಮಾತಿನ ಚಕಮಕಿ ನಡೆಸುತ್ತಿದ್ದರು.

ಎದ್ದು ನಿಲ್ಲೊಲ್ಲ-ಬೆಲ್ ಬಾರಿಸೊಲ್ಲ: ‘ನಾವೆಲ್ಲ ನಾಗರಿಕತೆ ಕಳೆದುಕೊಂಡಿದ್ದೇವೆ. ನಾನು ಸ್ಪೀಕರ್ ಪೀಠದಿಂದ ಎದ್ದು ನಿಲ್ಲುವುದಿಲ್ಲ. ಮಾತನಾಡುವ ಸದಸ್ಯರು ಕೂರುವಂತೆ ಸೂಚನೆ ನೀಡಲು ಬೆಲ್ ಬಾರಿಸುವುದಿಲ್ಲ. ಎಲ್ಲರಿಗೂ ಮುಕ್ತವಾಗಿ ಅವಕಾಶ ನೀಡುತ್ತೇನೆ. ಸಮಯ ಕೋರಿ ಅವಕಾಶ ನೀಡದರೆ ಮಾತನಾಡಿ’ ಎಂದು ಸ್ಪೀಕರ್ ರಮೇಶ್‌ಕುಮಾರ್ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News