ಸೀಮಿತ ಜನರಿಗಷ್ಟೇ ಕೆಂಪೇಗೌಡ ಪ್ರಶಸ್ತಿ ಪ್ರದಾನ: ಮೇಯರ್ ಗಂಗಾಂಬಿಕೆ

Update: 2019-07-18 18:28 GMT

ಬೆಂಗಳೂರು, ಜು.18: ಪ್ರಸಕ್ತ ವರ್ಷದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಜುಲೈ ಅಂತ್ಯದಲ್ಲಿ ಅಥವಾ ಆಗಸ್ಟ್ ಮೊದಲನೆ ವಾರದಲ್ಲಿ ಆಯೋಜಿಸಲಾಗುತ್ತಿದ್ದು, ಈ ಬಾರಿ ಸೀಮಿತ ಜನರಿಗೆ ಅಷ್ಟೇ ಕೆಂಪೇಗೌಡ ಪ್ರಶಸ್ತಿ ನೀಡಲಾಗುವುದು ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹೇಳಿದ್ದಾರೆ.

ಗುರುವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಯಿ ಚರಣಂ ಟ್ರಸ್ಟ್ ಹಾಗೂ ಪರಸ್ಪರ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅವರ ಜನ್ಮದಿನದಂದೇ ಆಚರಣೆ ಮಾಡಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲವಾದರೂ, ಜುಲೈ ಕೊನೆಯೊಳಗೆ ಆಚರಿಸಲು ತೀರ್ಮಾನ ಕೈಗೊಳ್ಳುತ್ತೇವೆ ಎಂದ ಅವರು, ಪ್ರಸ್ತುತ ವರ್ಷದಲ್ಲಿ ನೂರು ಜನರಿಗಷ್ಟೇ ಕೆಂಪೇಗೌಡ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿಯೂ ನಾನು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದಿನ ದಿನಗಳಲ್ಲಿ ಮೇಯರ್ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಇರುತ್ತಿದ್ದರು. ಆದರೆ, ಈ ಬಾರಿ ಕೆಂಪೇಗೌಡ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಉದ್ದೇಶದಿಂದ ಆರು ಜನರ ಸಮಿತಿ ರಚನೆ ಮಾಡಿದ್ದು, ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಹಿಂದೆ ಎಷ್ಟು ಜನರಿಗೆ ಪ್ರಶಸ್ತಿ ನೀಡಬೇಕು, ಯಾವ ಕ್ಷೇತ್ರದಿಂದ ಎಷ್ಟು ಜನರನ್ನು ಆರಿಸಬೇಕೆಂದು ನಿಯಮವಿರಲಿಲ್ಲ. ಪ್ರಸಕ್ತ ವರ್ಷದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕರಿದ್ದಾರೆ. ಎಲ್ಲರನ್ನೂ ಗುರುತಿಸುವುದು ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಸಾಧಕರನ್ನು ಗುರುತಿಸಿ ಗೌರವಿಸಬೇಕಾದ ಕೆಲಸ ಮಾಡಬೇಕು ಎಂದ ಅವರು, ಎಲ್ಲಿಯವರೆಗೂ ನಮಗೆ ಯಾವುದೇ ಪೈಪೋಟಿಯನ್ನು ಅಥವಾ ಕಷ್ಟವನ್ನು ಎದುರಿಸುವ ಸಾಮರ್ಥ್ಯ ಬರುವುದಿಲ್ಲವೋ ಅಲ್ಲಿಯವರೆಗೂ ನಾವು ಏನನ್ನೂ ಸಾಧಿಸಲು ಆಗುವುದಿಲ್ಲ ಎಂದು ನುಡಿದರು.

ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಒಳ್ಳೆಯ ಉದ್ದೆಶ ಮತ್ತು ಸಾಧಿಸುವ ಛಲ, ಸೇವಾ ಮನೋಭಾವವಿದ್ದರೆ ಸಮಾಜವು ನಮ್ಮನ್ನು ಸ್ವೀಕರಿಸುತ್ತದೆ. ಸಮಾಜದಿಂದ ಸಹಾಯ ಪಡೆದ ನಾವು ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಮ್ಮ ಭಾಷೆ, ಸಂಸ್ಕೃತಿ ಹಾಗೂ ನಮ್ಮ ಅಭಿವದ್ಧಿಗೆ ಎಲ್ಲ ರೀತಿಯ ಸಹಾಯ ಹಾಗೂ ಸಹಕಾರ ನೀಡುವ ಮೂಲಕ ಬಾಂಧವ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಹಣವಿರುವ ಶ್ರೀಮಂತರಷ್ಟೇ ಸಮಾಜ ಸೇವೆ ಮಾಡಲು ಸಾಧ್ಯ ಎಂಬ ಮನಸ್ಥಿತಿಯಿಂದ ಹೊರಬನ್ನಿ. ಬಡತನದಲ್ಲಿರುವ ಅನೇಕರು ಸಮಾಜಕ್ಕಾಗಿ ದುಡಿದಿದ್ದಾರೆ, ಸಾಧನೆಯನ್ನೂ ಮಾಡಿದ್ದಾರೆ. ಹಣವಿರಲಿ, ಇಲ್ಲದಿರಲಿ ಸೇವೆ ಮಾಡುವ ಮನಸ್ಸು ಹಾಗೂ ಕಾಳಜಿಯಿದ್ದರೆ ಏನು ಬೇಕಾದರೂ ಸಾಧಿಸಬಹುದು. ಅಲ್ಲದೆ, ಸೇವೆ ಮಾಡಿದವರನ್ನು ಗುರುತಿಸಿ, ಗೌರವಿಸುವುದು ನಮ್ಮ ಕರ್ತವ್ಯವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜೈನ್ ಅಧ್ಯಕ್ಷ ಜಿತೇಂದ್ರ ಕುಮಾರ್, ಕಲಾವಿದ ಶಶಿಧರ್ ಕೋಟೆ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News