ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಪಿನ್ ಸಲಹೆಗಾರರಾಗಿ ನರೇಂದ್ರ ಹಿರ್ವಾನಿ

Update: 2019-07-18 19:04 GMT

ಹೊಸದಿಲ್ಲಿ, ಜು.18: ಭಾರತದ ಮಾಜಿ ಆಟಗಾರ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಸ್ಪಿನ್ ಕೋಚ್ ನರೇಂದ್ರ ಹಿರ್ವಾನಿ ದೇಶದ ಮಹಿಳಾ ಕ್ರಿಕೆಟ್ ತಂಡದೊಂದಿಗೆ ಕಾರ್ಯನಿರ್ವಹಿಸಲು ಸಜ್ಜಾ ಗಿದ್ದಾರೆ.

 ಭಾರತದ ಪರ 17 ಟೆಸ್ಟ್ ಹಾಗೂ 18 ಏಕದಿನ ಪಂದ್ಯಗಳನ್ನು ಆಡಿರುವ ಹಿರ್ವಾನಿ ಸೆಪ್ಟಂಬರ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಸರಣಿ ವೇಳೆ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ಭಾರತದ ಮಹಿಳಾ ತಂಡದಲ್ಲಿ ಪೂನಂ ಯಾದವ್, ಎಕ್ತಾ ಬಿಶ್ತ್ ಹಾಗೂ ದೀಪ್ತಿ ಶರ್ಮಾ ಸಹಿತ ಸ್ಪಿನ್ ಬೌಲರ್‌ಗಳ ಸಂಖ್ಯೆ ಜಾಸ್ತಿ ಇರುವ ಕಾರಣ ತಂಡಕ್ಕೆ ಸ್ಪಿನ್ ಕೋಚ್ ಅಗತ್ಯವಿದೆ ಎಂದು ಭಾರತದ ಟಿ-20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಇತ್ತೀಚೆಗೆ ಹೇಳಿದ್ದರು.

 ‘‘ಈಗ ಹಿರ್ವಾನಿ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ವ್ಯಸ್ತವಾಗಿರುವ ಹಿನ್ನೆಲೆಯಲ್ಲಿ ಇದು ಅವರಿಗೆ ಪೂರ್ಣಕಾಲಿಕ ಹುದ್ದೆಯಲ್ಲ. ಅವರು ತಂಡದೊಂದಿಗೆ ಪ್ರಯಾಣಿಸುತ್ತಿರುತ್ತಾರೆ.ಎನ್‌ಸಿಎಯಲ್ಲಿ ಇತ್ತೀಚೆಗೆ ನಡೆದಿದ್ದ ಶಿಬಿರದಲ್ಲಿ ಭಾರತ ತಂಡದೊಂದಿಗೆ ಸ್ವಲ್ಪಸಮಯ ಕಾರ್ಯನಿರ್ವಹಿಸಿದ್ದರು’’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.

 ಭಾರತ ಮಹಿಳಾ ತಂಡಕ್ಕೆ ಬ್ಯಾಟಿಂಗ್ ಕೋಚ್ ಅಗತ್ಯವಿಲ್ಲ. ಮುಖ್ಯ ಕೋಚ್ ಹಾಗೂ ಭಾರತದ ಮಾಜಿ ಬ್ಯಾಟ್ಸ್‌ಮನ್ ಡಬ್ಲು ವಿ ರಾಮನ್ ಉಸ್ತುವಾರಿವಹಿಸಿಕೊಂಡಿದ್ದು, ವೇಗದ ಬೌಲಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರತ ಕಳೆದ 6 ಟಿ-20 ಪಂದ್ಯಗಳಲ್ಲಿ ಸೋತಿದೆ. ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯುವ ಟಿ-20 ವಿಶ್ವಕಪ್‌ಗೆ ತಯಾರಿ ಆರಂಭಿಸಿದೆ. ಮಾರ್ಚ್‌ನಿಂದ ಯಾವುದೇ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಸ್ವದೇಶದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News