ಸ್ಥಾನ ಉಳಿಸಿಕೊಳ್ಳಲು ಯಾರ ಬಳಿಯೂ ಅಂಗಲಾಚುವುದಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-07-19 12:24 GMT

ಬೆಂಗಳೂರು, ಜು. 19: ‘ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ನಾನು ಯಾವುದೇ ಸಂದರ್ಭದಲ್ಲಿಯೂ ಯಾರೊಬ್ಬರ ಬಳಿಯೂ ಅಂಗಲಾಚುವುದಿಲ್ಲ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಸ್ತಾವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕೆಲ ಶಾಸಕರು ರಾಜೀನಾಮೆ ನೀಡಿದ ವೇಳೆ ಯಡಿಯೂರಪ್ಪ ‘ತಪ್ಪಾಗಿದೆ ತಿದ್ದಿಕೊಳ್ಳುವೇ ಬನ್ನಿ ಕಾಪಾಡಿ’ ಎಂದು ಮನವಿ ಮಾಡಿದ್ದರು. ಆದರೆ, ನಾನು ಇನ್ನೂ ಅಂತಹ ಸ್ಥಿತಿಗೆ ಬಂದಿಲ್ಲ ಎಂದರು.

‘ಅಧಿಕಾರ ಯಾರಿಗೂ ಶಾಶ್ವತವಲ್ಲ. ಇಂದು ಬರುತ್ತದೆ, ನಾಳೆ ಹೋಗುತ್ತದೆ. ಅಧಿಕಾರದ ಕುರ್ಚಿಗೆ ಅಂಟಿಕೊಂಡು ಕೂರುವ ಜಾಯಮಾನ ನನ್ನದಲ್ಲ. ನಮ್ಮ ಕುಟುಂಬ ಪಂಚಾಯ್ತಿಯಿಂದ ಪ್ರಧಾನಿ ಹುದ್ದೆ ವರೆಗೂ ಎಲ್ಲ ರೀತಿಯ ಅಧಿಕಾರವನ್ನು ನೋಡಿದೆ’ ಎಂದರು.

ಈ ಕುರ್ಚಿ ಮುಖ್ಯವಲ್ಲ. ಆದರೆ, ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕ ಮಾಡುವಂತ ದುಸ್ಥಿತಿಗೆ ಬಂದಿದೆ. ಈ ಬಗ್ಗೆ ಗಂಭೀರ ಚರ್ಚೆ ಆಗಬೇಕಿದೆ ಎಂದ ಅವರು, ಯಾವ-ಯಾವ ಘಟನೆಗಳಿಗೆ ಕಾರಣರಾಗುತ್ತೀರಿ? ನೀವು ಅಧಿಕಾರಕ್ಕೆ ಬಂದು ಎಷ್ಟು ದಿನ ಇರುತ್ತೀರೋ ನೋಡುತ್ತೇನೆ ಎಂದರು.

ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಈ ಸರಕಾರ ಅಭದ್ರ ಎಂದು ಪ್ರಚಾರ ಮಾಡಿದ ನೀವು ರಾಜ್ಯಕ್ಕೆ ಸುಭದ್ರ ಸರಕಾರ ಯಾವ ರೀತಿ ಕೊಡುತ್ತೀರೋ ನೋಡುತ್ತೇನೆ. ಸರಕಾರ ರಚಿಸುವ ಆತುರದಲ್ಲಿ ಇದ್ದೀರಿ ಎಂದು ಕುಮಾರಸ್ವಾಮಿ, ಬಿಜೆಪಿ ಸದಸ್ಯರನ್ನು ಕೆಣಕಿದರು.

ಲೋಕಸಭೆಯಲ್ಲಿ ಪ್ರಧಾನಿ ಮೋದಿಗೆ ಬಹುಮತ ಬಂದಿರಬಹುದು. 1984ರಲ್ಲಿ ರಾಜೀವ್ ಗಾಂಧಿ ಅವರು 400ಕ್ಕೂ ಹೆಚ್ಚು ಸ್ಥಾನ ಗೆದಿದ್ದರು. ಆದರೆ, ಸಚಿವರೊಬ್ಬರು ಅವರ ಮೇಲೆ ಬೋಫೋರ್ಸ್ ಹಗರಣದ ಆರೋಪ ಹೊರಿಸಿದರು. ಆನಂತರ ಏನಾಯಿತು. ಇವೆಲ್ಲ ತಾತ್ಕಾಲಿಕ ಎಂದು ನೆನಪು ಮಾಡಿಕೊಂಡರು.

ಚುನಾವಣೆ ಫಲಿತಾಂಶ ಪ್ರಕಟಗೊಂಡ ವೇಳೆ ನಾನು ರಾಜಕೀಯ ನಿವೃತ್ತಿಗೆ ನಿರ್ಧಾರಕ್ಕೆ ಬಂದಿದ್ದೆ. ಕಾಂಗ್ರೆಸ್ ನಾಯಕರು ಸಿಎಂ ಆಗಿರಬೇಕೆಂದು ಕೋರಿದರು ಎಂದ ಅವರು, ಒಬ್ಬೊಬ್ಬ ಸದಸ್ಯರ ಕಾವಲಿಗೆ ನಾಲ್ಕೈದು ಮಂದಿ ನಿಯೋಜನೆ ಮಾಡಿಕೊಂಡಿದ್ದೀರಿ ಎಂದು ಟೀಕಿಸಿದರು.

ರಿಕ್ಷಾಗಳಂತೆ ಬಂದ ವಿಶೇಷ ವಿಮಾನಗಳು: ಮುಂಬೈನ ಹೊಟೇಲ್‌ನಲ್ಲಿ ಶಾಸಕರ ಕಾವಲಿಗೆ ಬೌನ್ಸರ್‌ಗಳನ್ನು ಇಟ್ಟಿಕೊಂಡಿದ್ದೀರಿ. ಇದನ್ನೆಲ್ಲ ಇನ್ನೂ ಎಷ್ಟು ದಿನ ನಡೆಸುತ್ತೀರಿ. ರಿಕ್ಷಾಗಳಿಗಿಂತ ವೇಗವಾಗಿ ವಿಶೇಷ ವಿಮಾನಗಳು ಬೆಂಗಳೂರಿನಿಂದ ಮುಂಬೈಗೆ ತೆರಳಿವೆ. ಮುಂದೆ ನಿಮಗೂ ಕಾದಿದೆ ಎಂದು ಅವರು ಎಚ್ಚರಿಸಿದರು.

‘ನ್ಯಾಯ ನಿರ್ಣಯದ ಆ ದಿನ ಬಂದೇ ಬರುತ್ತದೆ. ಅಂದು ನಮ್ಮ ನಡವಳಿಕೆ, ಕಾಯಕಗಳಿಗೆ ನಾವೇ ಉತ್ತರಿಸಬೇಕು. ಆ ಮಹತ್ವದ ದಿನ ನಮ್ಮ ಪರವಾಗಿ ವಾದಿಸಲು ನ್ಯಾಯವಾದಿಗಳು ಇರುವುದಿಲ್ಲ. ಬಂಧುಗಳು, ಅಭಿಮಾನಿಗಳ ಇರುವುದಿಲ್ಲ’

-ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News