ಎಚ್.ಡಿ.ಕುಮಾರಸ್ವಾಮಿ ಕಾಲಹರಣ ಮಾಡುತ್ತಿದ್ದಾರೆ: ಕೋಟ ಶ್ರೀನಿವಾಸ ಪೂಜಾರಿ

Update: 2019-07-19 12:50 GMT

ಬೆಂಗಳೂರು, ಜು.19: ವಿಧಾನಪರಿಷತ್ ಕಲಾಪ ಆರಂಭವಾಗುತ್ತಿದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಸರಕಾರವನ್ನು ಅಸ್ಥಿರಗೊಳಿಸುತ್ತಿರುವ ಬಿಜೆಪಿಗೆ ಧಿಕ್ಕಾರವೆಂದು ಪ್ರತಿಭಟಿಸಿದರು.

ಶುಕ್ರವಾರ ಪರಿಷತ್ ಕಲಾಪ ಕೇವಲ ಐದು ನಿಮಿಷಗಳ ಕಾಲ ನಡೆಯಿತು. ಇದರ ನಡುವೆ ಸದನದ ಬಾವಿಗಿಳಿದಿದ್ದ ಬಿಜೆಪಿ ಸದಸ್ಯರು, ಭಿತ್ತಿಪತ್ರಗಳನ್ನು ಹಿಡಿದು ವಿಶ್ವಾಸಮತ ಕಳೆದುಕೊಂಡಿರುವ ಮೈತ್ರಿ ಸರಕಾರಕ್ಕೆ ಧಿಕ್ಕಾರ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡಲೆ ರಾಜೀನಾಮೆ ನೀಡಲಿ ಎಂದು ಘೋಷಣೆ ಕೂಗಿದರು.

ಬಿಜೆಪಿ ಸದಸ್ಯರ ಪ್ರತಿಭಟನೆಗೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು, ನೀರಿಲ್ಲದ ಬಾವಿಗೆ ಇಳಿದು, ಸಮಯವನ್ನು ವ್ಯರ್ಥ ಮಾಡಬೇಡಿ. ಸದನಕ್ಕೆ ಅವಮಾನ ಮಾಡುತ್ತಿರುವ ಬಿಜೆಪಿಗೆ ಧಿಕ್ಕಾರ. ಬಿಜೆಪಿ ಏಜೆಂಟ್ ರಾಜ್ಯಪಾಲರಿಗೆ ಧಿಕ್ಕಾರವೆಂದು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ವಿಪಕ್ಷ ನಾಯಕ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಬರಗಾಲವಿದೆ. ಬಹುಮತ ಇಲ್ಲದ ಸರಕಾರ ವಿಧಾನಸಭೆಯಲ್ಲಿ ವಿಶ್ವಾಸಯಾಚನೆ ಮಾಡುವ ಬದಲು ಕಾಲಹರಣ ಮಾಡುತ್ತಿದೆ. ಹಿಂದಿನ ಹಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿಗಳು ಒಂದೇ ದಿನದಲ್ಲಿ ವಿಶ್ವಾಸ ಮತಯಾಚನೆ ಮಾಡಿರುವ ಉದಾಹರಣೆಗಳಿವೆ ಎಂದರು.

ಬಿ.ಎಸ್.ಯಡಿಯೂರಪ್ಪ ಮೂರು ಬಾರಿ ಒಂದೇ ದಿನದಲ್ಲಿ ವಿಶ್ವಾಸಮತ ಸಾಬೀತು ಪಡಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ. ಬಹುಮತ ಇಲ್ಲ ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಕಾಂಗ್ರೆಸ್ ಶಾಸರಕರನ್ನು ಬಿಜೆಪಿಯವರು ಹಿಡಿದಿಟ್ಟುಕೊಂಡಿದ್ದಾರೆ. ಈಗ ರಾಜ್ಯಪಾಲರು ಬಿಜೆಪಿ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ. ಸದನದಲ್ಲಿ ಪ್ರಜಾಪ್ರಭುತ್ವ ವಿರೋಧಿ ನೀತಿಗೆ ನಾವು ಅವಕಾಶ ಕೊಡುವುದಿಲ್ಲವೆಂದು ಬಿಜೆಪಿ ವಿರುದ್ಧ ಪ್ರತಿಭಟಿಸಿದರು.

ಈ ವೇಳೆ ಉಪಸಭಾಪತಿ ಧರ್ಮೇಗೌಡ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರಿಗೆ ಸದನ ನಡೆಯಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಆದರೂ ಸದನದಲ್ಲಿ ಪ್ರತಿಭಟನೆ, ಗದ್ದಲ ನಿಲ್ಲದಿದ್ದಾಗ ಸದನವನ್ನು ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News