ಪ್ರಾಮಾಣಿಕರು ಯಾರಿಗೂ ಬೇಕಿಲ್ಲ: ಸ್ಪೀಕರ್ ರಮೇಶ್‌ ಕುಮಾರ್ ಬೇಸರ

Update: 2019-07-19 13:59 GMT

ಬೆಂಗಳೂರು, ಜು.19: ‘ಪ್ರಾಮಾಣಿಕರು ಇರುವುದು ನಿಮಗೂ ಬೇಕಾಗಿಲ್ಲ. ಇವರಿಗೂ ಬೇಕಾಗಿಲ್ಲ. ಹೀಗಾದರೆ ಪ್ರಾಮಾಣಿಕರು ಎಲ್ಲಿಗೆ ಹೋಗಿ ಬದುಕಬೇಕು’ ಎಂದು ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು.

ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಸ್ತಾವದ ಮೇಲಿನ ಚರ್ಚೆ ವೇಳೆ ಜೆಡಿಎಸ್ ಸದಸ್ಯ ಶ್ರೀನಿವಾಸಗೌಡ 5ಕೋಟಿ ರೂ.ಆಮಿಷವೊಡ್ಡಿದ ಬಗ್ಗೆ ಪ್ರಸ್ತಾಪಿಸಿದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್, ನಾನೂ ಈ ಸ್ಥಾನದಲ್ಲಿ(ಪೀಠದಲ್ಲಿ) ಒಂದೊಂದು ಕ್ಷಣವೂ ಬೆಂಕಿಯ ಮೇಲೆ ಕುಳಿತಿದ್ದೇನೆ ಎನಿಸುತ್ತಿದೆ ಎಂದರು.

ಜವಾಬ್ದಾರಿ ಸ್ಥಾನದಲ್ಲಿರುವವರು ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಅಂತವರು ಹೊಟ್ಟೆಗೆ ಏನು ತಿನ್ನುತ್ತಾರೆ ಎಂದು ಕಿಡಿಕಾರಿದ ರಮೇಶ್‌ ಕುಮಾರ್, ನಾನು ವಾಸವಿರುವ ಮನೆಗೆ ಬಂದು ನೋಡಿ. ಸರಕಾರದ ನಾಮಫಲಕವನ್ನೂ ಹಾಕಿಸಿಲ್ಲ. ಒಬ್ಬ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಂಡಿಲ್ಲ. ನನಗೆ ಕೊಟ್ಟಿರುವ ಸರಕಾರಿ ವಾಹನದ ಮೇಲಿರುವ ಗೂಟವನ್ನು ತೆಗೆಸಿ ಹಾಕಿದ್ದೇನೆ. ನಿಮ್ಮ ಬದುಕು ಹೇಗಿದೆ ಅಂತ ನೀವೇ ನೋಡಿಕೊಳ್ಳಿ. ಅವರೆಲ್ಲರೂ ನಿಮ್ಮ ಹುಳುಕುಗಳನ್ನು ಬಿಚ್ಚಿಡುತ್ತಿದ್ದಾರೆ’ ಎಂದು ಕ್ಷಣಕಾಲ ಗದ್ಗದಿತರಾದರು.

‘ನೀವು ಈ ರೀತಿಯ ಜೀವನ ನಡೆಸುವುದಲ್ಲದೆ ನಮ್ಮನ್ನು ಅಪರಾಧಿಗಳನ್ನಾಗಿ ಮಾಡುತ್ತೀರಾ? ನಮ್ಮ ಕುಟುಂಬದವರು ಹೇಗೆ ಬದುಕಬೇಕು? ನಮ್ಮ ಮನೆಯವರು ಇತ್ತ ಕಡೆ ಮುಖವನ್ನೂ ಹಾಕಿಲ್ಲ. ನಿಮ್ಮ ವಸೂಲಿ ವ್ಯಾಪಾರ, ಸ್ವಾರ್ಥ ನೋಡಿ ಸಾಕಾಗಿದೆ. ಗೌರವವಾಗಿ ಬದುಕುವವರನ್ನು ಸಾಯಿಸುವುಕ್ಕೆ ಹೋಗುತ್ತಿದ್ದೀರಿ’ ಎಂದು ವಾಗ್ದಾಳಿ ನಡೆಸಿದರು.

ಸ್ಪೀಕರ್ ಸ್ಥಾನದಲ್ಲಿ ಹೇಗೆ ಕುಳಿತಿದ್ದೇನೆ ಎಂದು ನನಗೆ ಗೊತ್ತಿದೆ. ಒಂದೊಂದು ದಿನ ಬದುಕು ನಡೆಸುವುದು ಎಷ್ಟು ಕಷ್ಟ ಎನ್ನುವುದು ನನಗೆ ಗೊತ್ತಿದೆ. ಒಂದೊಂದೆ ವಿಚಾರವನ್ನು ಬಿಚ್ಚಿಡುತ್ತಾ ಹೋದರೆ ನಿಮ್ಮ ಸ್ವಾರ್ಥ ಎಲ್ಲಿಗೆ ಬೇಕಾದರೂ ಬಂದು ನಿಲ್ಲಬಹುದು ಎಂದರು.

‘ಎಲ್ಲರೂ ಬಿಚ್ಚಿ, ಇನ್ನೂ ಬಿಚ್ಚಿ ಹೊಟ್ಟೆಯಲ್ಲಿರುವುದನ್ನೆಲ್ಲವನ್ನೂ ಹೊರಗೆ ಹಾಕಿ. ನಿಮ್ಮ ಹೊಟ್ಟೆಯಲ್ಲಿರುವ ಎಲ್ಲ ಹೊಲಸು ಒಮ್ಮೆಗೆ ಹೊರಗೆ ಬಂದುಬಿಡಲಿ. ಆಗ ಜನರಿಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತದೆ. ವಿಪಕ್ಷದವರು ಆಡಳಿತ ಪಕ್ಷದವರ ಮೇಲೆ ಕೇಸ್ ಹಾಕಬೇಕು. ಅದು ಎಲ್ಲಿಗೆ ಹೋಗಿ ನಿಲ್ಲುತ್ತದೆ ನೋಡೋಣ’

-ರಮೇಶ್‌ ಕುಮಾರ್, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News