"ಬಿಎಸ್‌ವೈಗೆ 15 ದಿನ, ಎಚ್‌ಡಿಕೆಗೆ 15 ಗಂಟೆ ಕಾಲಾವಕಾಶ, ಇದು ರಾಜಭವನ ಕಚೇರಿಯ ದುರ್ಬಳಕೆಯಲ್ಲವೇ?"

Update: 2019-07-19 14:33 GMT

ಬೆಂಗಳೂರು, ಜು. 19: ‘ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವ ಅಧಿಕಾರ ರಾಜ್ಯಪಾಲರಿಗೆ ಇದೆಯೋ ಅಥವಾ ಇಲ್ಲವೋ’ ಎಂಬ ಬಗ್ಗೆ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ಪರ-ವಿರೋಧ ಚರ್ಚೆ ನಡೆಯಿತು. ಅಲ್ಲದೆ, ಪರಸ್ಪರ ವಾಗ್ಯುದ್ಧಕ್ಕೂ ಕಾರಣವಾಯಿತು.

ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಸ್ತಾವ ನಿರ್ಣಯ ಮಂಡನೆ ವೇಳೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ‘2018ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಬಹುಮತ ಸಾಬೀತಿಗೆ 15 ದಿನ ಕಾಲಾವಕಾಶ ನೀಡಿ, ಕುಮಾರಸ್ವಾಮಿ ಅವರಿಗೆ ಕೇವಲ 15 ಗಂಟೆ ಕಾಲಾವಕಾಶ ನೀಡುತ್ತಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದರ ಹಿಂದೆ ಷಂಡ್ಯತ್ರ ಇದೆ ಎಂದು ಗೊತ್ತಾಗುತ್ತದೆ. ಅಲ್ಲದೆ, ರಾಜಭವನ ಕಚೇರಿಯನ್ನು ತಮ್ಮ ವೈಯಕ್ತಿಕ ಹಿತಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್-ಜೆಡಿಎಸ್ ಸದಸ್ಯರು ರಾಜ್ಯಪಾಲರ ವಿರುದ್ಧ ಘೊಷಣೆ ಕೂಗಿದರು.

‘ವಿಶ್ವಾಸಮತ ಪ್ರಸ್ತಾವ ಮಂಡನೆ ಬಳಿಕ ರಾಜ್ಯಪಾಲರು ಸದನಕ್ಕೆ ಸೂಚನೆ ನೀಡಲು ಯಾವುದೇ ರೀತಿಯ ಅವಕಾಶವಿಲ್ಲ’ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದರು. ಇದಕ್ಕೆ ಬಿಜೆಪಿಯ ಮಾಧುಸ್ವಾಮಿ, ಬಸವರಾಜ್ ಬೊಮ್ಮಾಯಿ ಆಕ್ಷೇಪಿಸಿದರು.

ರಾಜ್ಯಪಾಲರು ಸಂವಿಧಾನದ ಮುಖ್ಯಸ್ಥರು. ಅವರಿಗೆ ಈ ಸರಕಾರಕ್ಕೆ ಸೂಚನೆ ನೀಡುವ ಎಲ್ಲ ಅಧಿಕಾರವಿದೆ. ಈ ಹಿಂದೆ ಹಲವು ರಾಜ್ಯಪಾಲರು ಸೂಚನೆಗಳನ್ನು ನೀಡಿದ್ದಾರೆ ಎಂದು ಸಮರ್ಥಿಸಿದರು. ‘ಎಸ್.ಆರ್.ಬೊಮ್ಮಾಯಿ ಸಿಎಂ ಆಗಿದ್ದ ವೇಳೆ ಸರಕಾರ ವಜಾಗೊಳಿಸುವ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ವೇಳೇ ಕೋರ್ಟ್ ರಾಜ್ಯಪಾಲರು ಆಡಳಿತ ಪಕ್ಷಕ್ಕೆ ಬಹುಮತ ಸಾಬೀತು ಪಡಿಸಲು ಸೂಚನೆ ನೀಡಬಹುದು. ಜೊತೆಗೆ ಅದಕ್ಕೆ ಒಂದು ವಾರ ಕಾಲ ನಿಗದಿ ಮಾಡಬಹುದು ಎಂದು ಆದೇಶ ನೀಡಲಾಗಿತ್ತು. ಆದರೆ, ಇಂದಿನ ಸ್ಥಿತಿ ಬೇರೆ ಇದೆ’ ಎಂದು ಸಚಿವ ಕೃಷ್ಣಬೈರೇಗೌಡ ಉಲ್ಲೇಖಿಸಿದರು.

‘ವಿಶ್ವಾಸಮತ ನಿರ್ಣಯವನ್ನು ಸ್ವತಃ ಮುಖ್ಯಮಂತ್ರಿ ಮಂಡಿಸುವುದಾಗಿ ಸದನಕ್ಕೆ ತಿಳಿಸಿದ್ದು, ಅವರೇ ಹೇಳಿರುವಾಗ ರಾಜ್ಯಪಾಲರು ಸೂಚನೆ ನೀಡುವ ಪ್ರಶ್ನೆ ಉದ್ಭವಿಸದು. ಈಗಾಗಲೇ ಆ ನಿರ್ಣಯ ಸದನದ ಸೊತ್ತಾಗಿದೆ ಎಂದು ಅವರು ಗಮನ ಸೆಳೆದರು.

ಸಂವಿಧಾನದಲ್ಲಿ ಯಾರಿಗೂ ಸರ್ವಾಧಿಕಾರಿಯಂತೆ ನಡೆದುಕೊಳ್ಳುವ ಅಧಿಕಾರವನ್ನು ಕೊಟ್ಟಿಲ್ಲ. ಮುಖ್ಯಮಂತ್ರಿ, ಸ್ಪೀಕರ್, ರಾಜ್ಯಪಾಲರು, ನ್ಯಾಯಾಧೀಶರು ಯಾರಿಗೂ ಸರ್ವಾಧಿಕಾರವಿಲ್ಲ. ವಿಶ್ವಾಸಮತ ನಿರ್ಣಯ ಸದನದ ಸೊತ್ತು ಹಾಗೂ ನೀವು ಇದನ್ನು ನಡೆಸುತ್ತಿರುವ ವೇಳೆ ರಾಜ್ಯಪಾಲ ಮಧ್ಯಪ್ರವೇಶ ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ದುರ್ಬಳಕೆ ಆರೋಪ: ಅಧಿಕಾರದ ಹಪಹಪಿಗಾಗಿ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂದಿನ ಪರಿಸ್ಥಿತಿ ನೋಡಿದರೆ ಇದು ಪ್ರಜಾಪ್ರಭುತ್ವವೆ ಎನ್ನುವ ಸಂಶಯ ಜನರಲ್ಲಿ ಮೂಡುತ್ತಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಕೋಟಿ ಕೋಟಿ ರೂ. ಹಣ ನೀಡಿ ಶಾಸಕರನ್ನು ಖರೀದಿ ಮಾಡುತ್ತೀರಿ. ಇರುವ ವಿಚಾರವನ್ನು ಹೇಳಲು ನಾನೇಕೆ ಹಿಂಜರಿಯಬೇಕು. ನಾನು ಅಂತಹ ಯಾವುದೇ ಅನ್ಯಾಯದ ಕೆಲಸ ಮಾಡಿಲ್ಲ. ನೀವು (ಬಿಜೆಪಿ) ನಮಗೆ ಪಾಠ ಹೇಳಬೇಡಿ ಎಂದು ಕೃಷ್ಣಬೈರೇಗೌಡ ಆಕ್ರೋಶ ಹೊರಹಾಕಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಮಾಧುಸ್ವಾಮಿ, ‘ನಮಗೆ ಮಾತಾನಾಡಲು ಅನುಮತಿ ಜೊತೆಗೆ ರಕ್ಷಣೆಯನ್ನೂ ನೀಡಬೇಕು. ವಿಶ್ವಾಸಮತ ಸಾಬೀತಿಗೆ ಸೂಚನೆ ನೀಡುವ ಎಲ್ಲ ಅಧಿಕಾರ ರಾಜ್ಯಪಾಲರಿಗೆ ಇದೆ ಎಂದು ಸಮರ್ಥಿಸಿದರು.

ಸರಕಾರದ ಮೇಲೆ ಸಂಶಯ ಬಂದರೆ ಬಹುಮತ ಸಾಬೀತು ಪಡಿಸುವಂತೆ ಕೇಳುವ ಅಧಿಕಾರ ರಾಜ್ಯಪಾಲರಿಗಿದೆ. ಇದು ಸಂವಿಧಾನಾತ್ಮಕ ಹಕ್ಕು. ಸರಕಾರವನ್ನು ಬಹುಮತ ಸಾಬೀತು ಮಾಡುವಂತೆ ರಾಜ್ಯಪಾಲರು ಕೇಳುವುದು ತಪ್ಪು ಎಂದು ಎಲ್ಲಿಯೂ ವ್ಯಾಖ್ಯಾನವಿಲ್ಲ ಎಂದು ಮಾಧುಸ್ವಾಮಿ ಹೇಳಿದರು.

‘ನಿಮ್ಮಲ್ಲಿ ಹೋಗುವವರು ಇಲ್ಲದೆ ಅವರು ಏಕೆ ಅವರಿಗೆ ರಕ್ಷಣೆ ಕೊಡುತ್ತಾರೆ. ಅವರ ಕಾವಲಿಗೆ ನೀವು ಸರಿಯಾದ ಕಾವಲುಗಾರರನ್ನು ಇಟ್ಟುಕೊಳ್ಳಿ’

-ರಮೇಶ್‌ ಕುಮಾರ್, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News