ರಾಜಕೀಯ ಬೆಳವಣಿಗೆಗಳಿಗೆ ಅಮಿತ್ ಶಾ ಕಾರಣ: ದಿನೇಶ್ ಗುಂಡೂರಾವ್ ಆರೋಪ

Update: 2019-07-19 14:39 GMT

ಬೆಂಗಳೂರು, ಜು.19: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಗೆ ಅಮಿತ್ ಶಾ ನಿರ್ದೇಶನವೇ ಕಾರಣ ಎಂದು ಕಾಂಗ್ರೆಸ್ ಸದಸ್ಯ ದಿನೇಶ್ ಗುಂಡೂರಾವ್ ಮಾಡಿದ ಆರೋಪವು, ಕೆಲಕಾಲ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದಕ್ಕೆ ಎಡೆ ಮಾಡಿಕೊಟ್ಟಿತು.

ಶುಕ್ರವಾರ ಭೋಜನ ವಿರಾಮದ ಬಳಿಕ ವಿಧಾನಸಭೆ ಸಮಾವೇಶಗೊಂಡಾಗ ಮಾತನಾಡಿದ ದಿನೇಶ್ ಗುಂಡೂರಾವ್, ಒಂದು ಸರಕಾರವಾಗಿ ನಾವು ಶಾಸಕರ ಮನವೊಲಿಸುವ ಕೆಲಸ ಮಾಡಬೇಕಿದೆ. ಒಂದು ವರ್ಷದಿಂದ ನಮ್ಮ ಸರಕಾರದ ಕೊಡುಗೆ, ಸಾಧನೆಗಳು ಏನು ಎಂಬುದನ್ನು ಜನರಿಗೆ ತಿಳಿಸಬೇಕಿದೆ. ಆದುದರಿಂದ, ಎಲ್ಲ ಸದಸ್ಯರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಿ ಎಂದು ಕೋರಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ವಿಶ್ವಾಸ ನಿರ್ಣಯದ ಬಗ್ಗೆ ಸಂಸತ್ತಿನಲ್ಲಿ 10 ದಿನ ಚರ್ಚೆ ನಡೆಸಿದ್ದರು. ನಮಗೆ ವಿಶ್ವಾಸವಿದೆ, ಮುಖ್ಯಮಂತ್ರಿ ವಿಶ್ವಾಸಮತವನ್ನು ಗೆಲ್ಲುತ್ತಾರೆ. ಆದರೆ, ಬಿಜೆಪಿಯವರಿಗೆ ತಮ್ಮ ಶಾಸಕರ ಮೇಲೆ ನಂಬಿಕೆಯಿಲ್ಲವೇ? ನಾವು ಹೇಳುವುದನ್ನು ಕೇಳುವ ಸೌಜನ್ಯ ಹಾಗೂ ಸಹನೆ ಇಲ್ಲವೇ? ಎಂದು ಅವರು ಪ್ರಶ್ನಿಸಿದರು.

ಈ ಹಿಂದೆ ಬಹುಮತ ಸಾಬೀತುಪಡಿಸಲು 15 ದಿನ ಕಾಲಾವಕಾಶ ನೀಡಿರುವಾಗ, ಸದನದಲ್ಲಿ ಇವತ್ತೇ ಬಹುಮತ ಸಾಬೀತುಪಡಿಸುವಂತೆ ಒತ್ತಾಯಿಸುವುದು ಎಷ್ಟು ಸರಿ. ಈ ಸರಕಾರವನ್ನು ತೆಗೆಯಲು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಲು ಪ್ರಯತ್ನಿಸಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.

ಈ ಎಲ್ಲ ಬೆಳವಣಿಗೆಗಳಿಗೆ ಅಮಿತ್ ಶಾ ನಿರ್ದೇಶನವೇ ಕಾರಣ ಎಂದು ದಿನೇಶ್ ಗುಂಡೂರಾವ್ ಆರೋಪಿಸುತ್ತಿದ್ದಂತೆ, ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಪದೇ ಪದೇ ಸಿ.ಟಿ.ರವಿ ಮಧ್ಯಪ್ರವೇಶಿಸಿ ಹೇಳಿಕೆ ನೀಡುತ್ತಿದ್ದನ್ನು ಗಮನಿಸಿದ ವಿಪಕ್ಷ ನಾಯಕ ಯಡಿಯೂರಪ್ಪ, ಸಿ.ಟಿ.ರವಿ ಬಳಿ ಹೋಗಿ ಯಾವುದಕ್ಕೂ ಪ್ರತಿಕ್ರಿಯಿಸಿದಂತೆ ಸೂಚನೆ ನೀಡಿದರು.

ನಂತರ ಮಾತು ಮುಂದುವರೆಸಿದ ದಿನೇಶ್ ಗುಂಡೂರಾವ್, ಶ್ರೀನಿವಾಸಗೌಡ ಗಂಭೀರವಾದ ಆರೋಪ ಮಾಡಿದರೂ ವಿರೋಧ ಪಕ್ಷದ ಸದಸ್ಯರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಎಂತಹ ವಿರೋಧ ಪಕ್ಷವಿದು ಎಂದು ಕೆಣಕಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಸದನದ ಸದಸ್ಯರಲ್ಲ. ಅವರು ತಮ್ಮನ್ನು ಸಮರ್ಥಿಸಿಕೊಳ್ಳಲು ಇಲ್ಲಿಗೆ ಬರಲು ಸಾಧ್ಯವಿಲ್ಲ. ಆದುದರಿಂದ, ಅಮಿತ್ ಶಾಗೆ ಸಂಬಂಧಿಸಿದಂತೆ ಪ್ರಸ್ತಾಪವಾಗಿರುವ ವಿಷಯವನ್ನು ಕಡತಕ್ಕೆ ಹೋಗಬಾರದು ಎಂದು ಸ್ಪೀಕರ್ ರಮೇಶ್ ಕುಮಾರ್ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News