ಬಿಜೆಪಿ ಸದಸ್ಯರೊಂದಿಗೆ ರಾಜಕೀಯಕ್ಕೆ ಮೀರಿದ ಸ್ನೇಹವಿದೆ: ಡಾ.ಜಿ.ಪರಮೇಶ್ವರ್

Update: 2019-07-19 15:26 GMT
Photo: aninews.in 

ಬೆಂಗಳೂರು, ಜು.19: ಬಿಜೆಪಿ ಸದಸ್ಯರೊಂದಿಗೆ ರಾಜಕೀಯಕ್ಕೆ ಹೊರತಾದ ಸ್ನೇಹವಿದೆ. ನಾವು ಸದನದಲ್ಲಿ ರಾಜಕೀಯ ವಿಚಾರವಾಗಿ ಏನೇ ಚರ್ಚೆ, ವಾಗ್ವಾದ ನಡೆಸಿದರೂ ಹೊರಗಡೆ ನಾವೆಲ್ಲರೂ ಸ್ನೇಹಿತರು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. 

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮುಂದೂಡಿದ್ದನ್ನು ಪ್ರತಿಭಟಿಸಿ ಬಿಜೆಪಿ ಸದಸ್ಯರು ವಿಧಾನಸೌಧದ ಪಡಸಾಲೆಯಲ್ಲಿ ಧರಣಿ ನಡೆಸಿ, ಅಲ್ಲಿಯೆ ಮಲಗಿದ್ದರು. ಇಂದು ಬೆಳಗ್ಗೆ ಅವರನ್ನು ಭೇಟಿಯಾದ ಡಾ.ಜಿ.ಪರಮೇಶ್ವರ್ ಕುಶಲೋಪರಿ ವಿಚಾರಿಸಿದರು.

ಈ ವೇಳೆ ಬಿಜೆಪಿ ಸದಸ್ಯರೊಂದಿಗೆ ಉಪಾಹಾರ ಸೇವಿಸಿದ ಅವರು, ಬಿಜೆಪಿ ಶಾಸಕರು ಗುರುವಾರ ರಾತ್ರಿಯಿಂದ ಇಲ್ಲೇ ಇದ್ದಾರೆ. ಅವರಿಗೆ ಊಟ, ತಿಂಡಿ ವ್ಯವಸ್ಥೆ ಮಾಡುವುದು, ಅವರ ಬೇಕು ಬೇಡಗಳನ್ನು ಕೇಳುವುದು ನಮ್ಮ ಕರ್ತವ್ಯ. ಕೆಲವು ಶಾಸಕರಿಗೆ ಬಿಪಿ, ಡಯಾಬಿಟಿಸ್ ಇದೆ. ಹೀಗಾಗಿ ವೈದ್ಯ ಹಾಗೂ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಬಿಜೆಪಿ ಶಾಸಕ ಸುರೇಶ್‌ಕುಮಾರ್ ಸೇರಿದಂತೆ ಹಲವರ ಜೊತೆ ಒಡನಾಟವಿದೆ. ಇದು ರಾಜಕೀಯ ಮೀರಿದ ಸ್ನೇಹ. ನಾವು ಒಳಗಡೆ ಸದನದಲ್ಲಿ ರಾಜಕೀಯವಾಗಿ ಏನೇ ಚರ್ಚೆ ಮಾಡಿಕೊಂಡರೂ ಹೊರಗೆ ನಾವೆಲ್ಲರೂ ಸ್ನೇಹಿತರು. ಮಾನವೀಯತೆ ದೃಷ್ಟಿಯಿಂದ ನಾವೆಲ್ಲಾ ನಡೆದುಕೊಳ್ಳುತ್ತೇವೆ. ಅದು ಪ್ರಜಾಪ್ರಭುತ್ವದಲ್ಲಿ ಬಹಳ ಮುಖ್ಯ. ಇದನ್ನೆ ಪ್ರಜಾಪ್ರಭುತ್ವದ ಸೌಂದರ್ಯ ಎನ್ನುವುದು ಎಂದು ಅವರು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News