ಮೈತ್ರಿ ಸರಕಾರ ಮಾಡಿರುವ ಪಾಪದ ಕೆಲಸವೇನು?: ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಪ್ರಶ್ನೆ

Update: 2019-07-19 16:51 GMT

ಬೆಂಗಳೂರು, ಜು.19: ರಾಜ್ಯ ಸರಕಾರ ರಾಜಕೀಯ ದೊಂಬರಾಟ ಮಾಡುತ್ತಿದೆ, ಮೈತ್ರಿ ಸರಕಾರದ ವೈಫಲ್ಯ ಮರೆಮಾಚಲು ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ. ಈ ಸರಕಾರ ಮಾಡಿರುವ ಪಾಪದ ಕೆಲಸವೇನು? ನಮ್ಮಿಂದಾಗಿರುವ ಅನಾಹುತ ಏನು ಅನ್ನೋದರ ಬಗ್ಗೆ ಗಮನ ಸೆಳೆಯಲಿ ಎಂದು ಮುಖ್ಯಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ಶುಕ್ರವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಮಾತನಾಡಿದ ಅವರು, ರಾಜ್ಯ ಸರಕಾರದಲ್ಲಿ ವರ್ಗಾವಣೆ ಸೇರಿದಂತೆ ಯಾವ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ, ಅಕ್ರಮಗಳು ನಡೆದಿವೆ ಎಂಬುದರ ಕುರಿತು ಚರ್ಚೆ ನಡೆಸಲಿ. ರಾಜ್ಯದ ಜನತೆಗೂ ನಾವು ಏನು ಮಾಡಿದ್ದೇವೆ ಎಂಬುದು ತಿಳಿಯಲಿ ಎಂದು ಸವಾಲು ಹಾಕಿದರು.

ರಾಜಕೀಯದ ಆಟಗಳನ್ನು ನಮ್ಮಿಂದ ಹೆಚ್ಚಾಗಿ ವಿರೋಧ ಪಕ್ಷದ ನಾಯಕರೇ ಆಡಿದ್ದಾರೆ. 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಆನಂತರ ಸದಾನಂದಗೌಡರನ್ನು ಮುಖ್ಯಮಂತ್ರಿ ಮಾಡಲಾಯಿತು. ನ್ಯಾಯಾಲಯದಲ್ಲಿ ತಮ್ಮ ಚತುರತೆಯಿಂದ ಪ್ರಕರಣಗಳಿಂದ ಹೊರಗೆ ಬಂದು, ಸದಾನಂದಗೌಡರನ್ನು ಇಳಿಸಿ ಮತ್ತೆ ಅವರೇ ಮುಖ್ಯಮಂತ್ರಿಯಾಗಲು ಪ್ರಯತ್ನಿಸಿದ್ದರು ಎಂದು ಕುಮಾರಸ್ವಾಮಿ ಹೇಳಿದರು.

ನನ್ನ ಸರಕಾರದಲ್ಲಿ 20, 30, 40 ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ. ಕಾಮಗಾರಿ ನಡೆಸದೆ ಹಣವನ್ನು ಪಡೆಯಲಾಗುತ್ತಿದೆ ಎಂದೆಲ್ಲ ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ದಾಖಲೆಗಳು, ಮಾಹಿತಿ ಇದ್ದರೆ ಇಲ್ಲಿಟ್ಟು ಚರ್ಚೆ ನಡೆಸಲಿ, ಈ ರಾಜ್ಯದಲ್ಲಿ ಪರ್ಸೆಂಟೇಜ್ ವ್ಯವಹಾರ ಎಲ್ಲಿಂದ ಆರಂಭವಾಯಿತು ಎಂಬುದು ನನಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕೇಂದ್ರ ಸಚಿವ ಸದಾನಂದಗೌಡ ಶಾಸಕರಿಗೆ ಸಿಗಬೇಕಾದ ಸವಲತ್ತು ನೀಡಿದ್ದರೆ, ಹೀಗೆ ಆಗುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ಯಾವ ಸವಲತ್ತುಗಳನ್ನು ನೀಡಬೇಕಿತ್ತು ಅನ್ನೋದು ನನಗೆ ಗೊತ್ತಾಗುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಯಡಿಯೂರಪ್ಪ ಅಳಿಯನನ್ನು ಧಾರವಾಡದಲ್ಲಿ ಇಟ್ಟಿದೆ. ಅವರು ಎಷ್ಟು ದುಡ್ಡು ಕೊಟ್ಟಿದ್ದಾರೆ ಅನ್ನೋದು ಕೇಳಬೇಕು. ನನ್ನ ಇಲಾಖೆಯಲ್ಲಿ ನಾನು ಕೆಲಸ ಮಾಡಿದ್ದೇನೆ. ಸದನದಲ್ಲಿ ನನಗೂ ಜವಾಬ್ದಾರಿಯಿದೆ. ಬಡವರ ಕೆಲಸವನ್ನು ಮಾಡಿದ್ದೇನೆ ಎಂದರು.

ಲೋಕೋಪಯೋಗಿ ಇಲಾಖೆಯಲ್ಲಿ ಆಗಿರುವ ಕೆಲಸಗಳ ಬಗ್ಗೆ ರಾಜ್ಯದ ಜನತೆಗೆ ತಿಳಿಸಬೇಕು. ಅದಕ್ಕಾಗಿ ನನಗೆ ಸೋಮವಾರ ಎರಡು ಗಂಟೆ ಅವಕಾಶ ಕಲ್ಪಿಸಿಕೊಡಬೇಕು ಎಂದು ರೇವಣ್ಣ ಮನವಿ ಮಾಡಿದರು.

ಕೇಂದ್ರ ಸರಕಾರದ ಸಹಭಾಗಿತ್ವದ ಯೋಜನೆಗಳಲ್ಲಿ ಮಾತ್ರ ಕೆಲಸ ಆಗುತ್ತಿದೆ ಎಂದು ವಿಪಕ್ಷ ನಾಯಕರು ತಿಳಿಸಿದ್ದಾರೆ. ರಾಜ್ಯದಲ್ಲಿ ಬರಗಾಲವಿದ್ದು, ಜನ ಗುಳೆ ಹೋಗಬಾರದೆಂದು ನರೇಗಾ ಯೋಜನೆಯಡಿ 10 ಕೋಟಿ ಮಾನವ ದಿನಗಳ ಉದ್ಯೋಗ ಸೃಜಿಸಿದ್ದೇವೆ. ಕೇಂದ್ರ ಸರಕಾರದಿಂದ ಬರಬೇಕಾದ 2 ಸಾವಿರ ಕೋಟಿ ರೂ.ಗಳು ಇನ್ನು ಬಂದಿಲ್ಲ. ರಾಜ್ಯದಿಂದಲೇ ಕೇಂದ್ರದ ಪಾಲು ಭರಿಸಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ನಾನು ವಿಶ್ವಾಸಮತ ನಿರ್ಣಯವನ್ನು ಮಂಡನೆ ಮಾಡಿದಾಗ ಹಲವಾರು ವಿಷಯಗಳನ್ನು ಪ್ರಾರಂಭಿಕ ಹಂತದಲ್ಲಿ ತಿಳಿಸಿದ್ದೇನೆ. ಇನ್ನು ಹಲವು ವಿಚಾರಗಳ ಬಗ್ಗೆ ಮಾತನಾಡಬೇಕಿದೆ. ಉಳಿದ ಸದಸ್ಯರು ಮಾತನಾಡಿದ ಬಳಿಕ ನಾನು ಅಂತಿಮವಾಗಿ ಮಾತನಾಡುತ್ತೇನೆ ಎಂದರು.

ದುರಪಯೋಗಪಡಿಸಿಕೊಂಡಿಲ್ಲ

ಬಿಜೆಪಿಯವರು ಈ ಹಿಂದೆ ಸ್ಪೀಕರ್ ಆಗಿದ್ದ ಕೆ.ಜಿ.ಬೋಪಯ್ಯರನ್ನು ದುರುಪಯೋಗಪಡಿಸಿಕೊಂಡು ಬೆಳಗ್ಗೆ 5 ಗಂಟೆಗೆ ಶಾಸಕರನ್ನು ಅನರ್ಹಗೊಳಿಸಿ, ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಿದ ರೀತಿಯಲ್ಲಿ ನಾವು ಸ್ಪೀಕರ್ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿಲ್ಲ. ಈ ಸದನದಲ್ಲಿ ನಡೆಯುತ್ತಿರುವ ಮಹತ್ವದ ವಿಷಯದ ಕುರಿತು ಮಾತನಾಡಲು ನಮಗೆ ಅವಕಾಶ ಕೊಡುವಂತೆ ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ.

-ಎಚ್.ಡಿ.ರೇವಣ್ಣ, ಲೋಕೋಪಯೋಗಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News