ಜೆಡಿಎಸ್ ಶಾಸಕ ಶ್ರೀನಿವಾಸಗೌಡ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಮನವಿ

Update: 2019-07-19 17:06 GMT

ಬೆಂಗಳೂರು, ಜು.19: ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲು 5 ಕೋಟಿ ರೂ. ನೀಡುವುದಾಗಿ ನಾನು ಆಮಿಷ ಒಡ್ಡಿರುವುದಾಗಿ ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ವಿಧಾನಸಭೆಯಲ್ಲಿ ಇಂದು ಆರೋಪ ಮಾಡಿದ್ದು, ಈ ವಿಚಾರದ ಕುರಿತು ವಿಧಾನಸಭೆಯ ಕಾರ್ಯವಿಧಾನ ಹಾಗೂ ನಿಯಮ 192ರ ಅಡಿಯಲ್ಲಿ ಹಕ್ಕುಚ್ಯುತಿ ಮಂಡನೆಗೆ ಅವಕಾಶ ಕೋಡುವಂತೆ ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್, ಸ್ಪೀಕರ್‌ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಶಾಸಕರು ಇದೇ ವಿಚಾರವನ್ನು ಈ ಹಿಂದೆಯೂ ಪ್ರಸ್ತಾಪಿಸಿ ‘ನನಗೆ 30 ಕೋಟಿ ರೂ.ಆಮಿಷವೊಡ್ಡಿದ್ದರು, ನಾನು ಬಾತ್‌ರೂಂಗೆ ಹೋಗಿದ್ದಾಗ ಬಿಜೆಪಿ ಮುಖಂಡರು ನನ್ನ ಮನೆಯಲ್ಲಿ 5 ಕೋಟಿ ರೂ.ಗಳನ್ನು ಇಟ್ಟು ಹೋಗಿದ್ದರು’ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು ಎಂದು ವಿಶ್ವನಾಥ್ ಪತ್ರದಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ರಾಜ್ಯ ಸರಕಾರವು ಅವರು ಹೇಳಿದ್ದ ವಿಚಾರವನ್ನು ಎಸಿಬಿಗೆ ತನಿಖೆ ಮಾಡಲು ಸೂಚಿಸಿತ್ತು. ಎಸಿಬಿ ಅಧಿಕಾರಿಗಳು ಈ ಶಾಸಕರಿಗೆ ನೋಟಿಸ್ ನೋಡಿ, ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿತ್ತು ಎಂದು ಅವರು ಹೇಳಿದ್ದಾರೆ.

ಆ ಪ್ರಕಾರ ಹಲವು ಬಾರಿ ವಿಚಾರಣೆಗೆ ಹಾಜರಾದ ಶಾಸಕರು ಅಂತಿಮವಾಗಿ ಮಾ.18ರಂದು ವಿಚಾರಣೆಗೆ ಹಾಜರಾಗಿ ‘ಮಾಧ್ಯಮಗಳ ಮುಂದೆ ನಾನು ಸುಳ್ಳು ಹೇಳಿಕೆ ನೀಡಿದ್ದೆ ಎಂದು ಎಸಿಬಿ ಅಧಿಕಾರಿಗಳ ಮುಂದೆ ಅಧಿಕೃತವಾಗಿ ಹೇಳಿಕೆ ದಾಖಲಿಸಿರುತ್ತಾರೆ’ ಎಂದು ತಿಳಿದು ಬಂದಿದೆ. ಈ ಮೇಲ್ಕಂಡಂತೆ ಎಸಿಬಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದ ಕೋಲಾರ ಕ್ಷೇತ್ರದ ಶಾಸಕರು ಇಂದು ಅಧಿವೇಶನದಲ್ಲಿ ಏಕಾಏಕಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಯಾವುದೇ ದಾಖಲೆ ಇಲ್ಲದೆ ನನ್ನ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ನನ್ನ ಘನತೆಗೆ ಮತ್ತು ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ ಎಂದು ವಿಶ್ವನಾಥ್ ಹೇಳಿದ್ದಾರೆ.

ಶಾಸಕರು ಅಧಿವೇಶನದಲ್ಲೇ ಈ ರೀತಿ ಯಾವುದೇ ಆಧಾರ ಇಲ್ಲದೆ ಸುಳ್ಳು ಆರೋಪಗಳನ್ನು ಮಾಡಿರುವುದರಿಂದ, ಶಾಸಕನಾಗಿ ನನ್ನ ಹಕ್ಕಿಗೆ ಚ್ಯುತಿ ಬಂದಿದೆ. ಅಧಿವೇಶನದಲ್ಲಿ ನಾನು ಶಾಸಕನಾಗಿ ನನ್ನ ಕರ್ತವ್ಯಗಳನ್ನು ಪಾಲಿಸಲು ಇದರಿಂದ ನಿರ್ಬಂಧಿಸಿದಂತಾಗಿದೆ. ಆದುದರಿಂದ, ಕೋಲಾರ ಶಾಸಕರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಅವಕಾಶ ನೀಡಬೇಕೆಂದು ವಿಶ್ವನಾಥ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News