ಪಿಒಪಿ ಗಣೇಶ ಮೂರ್ತಿಗಳು ನಗರದೊಳಗೆ ಪ್ರವೇಶಿಸದಂತೆ ಬಿಬಿಎಂಪಿ ಕ್ರಮ

Update: 2019-07-19 17:07 GMT

ಬೆಂಗಳೂರು, ಜು.19: ನಗರದೊಳಗೆ ಪಿಒಪಿ ಗಣೇಶ ಮೂರ್ತಿಗಳನ್ನು ತರದಂತೆ ಜಾಗೃತಿ ವಹಿಸಲು ಮುಂದಾಗಿರುವ ಬಿಬಿಎಂಪಿಯು ಪೊಲೀಸ್ ಇಲಾಖೆಯ ನೆರವಿನೊಂದಿಗೆ ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಗಣೇಶ ಮೂರ್ತಿಗಳು ನಗರ ಪ್ರವೇಶಿಸದಂತೆ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.

ಪಾಲಿಕೆಯಿಂದ ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳನ್ನು ತಯಾರಿಸುವುದು ಹಾಗೂ ಮಾರಾಟ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೂ, ಕೆಲವು ಕಡೆಗಳಲ್ಲಿ ಪಿಒಪಿ ಮೂರ್ತಿಗಳನ್ನು ತಯಾರಿಸುತ್ತಿರುವ ಮಾಹಿತಿಯಿದೆ. ಈ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ, ಪೊಲೀಸರ ನೆರವಿನೊಂದಿಗೆ ಬಿಬಿಎಂಪಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಲಿದ್ದಾರೆ. ಈ ಸಂಬಂಧ ಪೊಲೀಸ್ ಇಲಾಖೆಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ.

ನಗರದ ಕುಂಬಳಗೋಡಿನಲ್ಲಿ ನಿಷೇಧಕ್ಕೊಳಪಟ್ಟಿರುವ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸಿದ್ದು, ಅದನ್ನು ಸಂಘ-ಸಂಸ್ಥೆಗಳಿಗೆ ವಿತರಣೆ ಮಾಡುವ ಸಾಧ್ಯತೆಯಿದೆ. ಪಿಒಪಿ ಮೂರ್ತಿಗಳನ್ನು ನೀರಿಗೆ ವಿಸರ್ಜನೆ ಮಾಡುವುದರಿಂದ ನೀರು ಮಲಿನಗೊಳ್ಳುತ್ತದೆ. ಹೀಗಾಗಿ, ಪಾಲಿಕೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಪಿಒಪಿ ಮೂರ್ತಿಗಳು ಕಂಡು ಬಂದಲ್ಲಿ ದುಬಾರಿ ದಂಡ ವಿಧಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಈಗಾಗಲೇ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಕುರಿತು ಸ್ಪಷ್ಟ ನಿರ್ದೇಶನ ನೀಡಿದ್ದು, ಯಾವುದೇ ಕಾರಣಕ್ಕೂ ಪಿಒಪಿ ಮೂರ್ತಿಗಳಿಗೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದೆ. ಎಲ್ಲೆಲ್ಲಿ ಪಿಒಪಿ ಮೂರ್ತಿಗಳನ್ನು ತಯಾರು ಮಾಡಲಾಗುತ್ತಿದೆಯೋ ಅಲ್ಲಿ ದಾಳಿ ನಡೆಸಿ, ಅದನ್ನು ನಾಶ ಮಾಡುವಂತೆಯೂ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಿರುವ ಪಾಲಿಕೆ ಅಧಿಕಾರಿಗಳು ನಗರದಾದ್ಯಂತ ಮುನ್ನೆಚ್ಚರಿಕಾ ಕ್ರಮವಾಗಿ ಮೂರ್ತಿಗಳು ನಗರ ಪ್ರವೇಶಿಸದಂತೆ ಕಾರ್ಯಯೋಜನೆ ರೂಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News