ಮಳೆ ನೀರು ನಿರ್ವಹಣೆ ವೈಫಲ್ಯಕ್ಕೆ ಬಿಬಿಎಂಪಿ ಕಾರಣ: ಆಮ್ ಆದ್ಮಿ

Update: 2019-07-19 17:08 GMT

ಬೆಂಗಳೂರು, ಜು.19: ಬೆಂಗಳೂರಲ್ಲಿ ಮಳೆ ನೀರು ನಿರ್ವಹಣೆ ವೈಫಲ್ಯಕ್ಕೆ ಬಿಬಿಎಂಪಿ ಬೇಜವಾಬ್ದಾರಿಯೇ ಕಾರಣ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿ ವರ್ಷಗಳೇ ಕಳೆಯುತ್ತಿವೆ. ನೀರಿನ ಪೂರೈಕೆಗಾಗಿ ರಾಜ್ಯದ ವಿವಿಧ ನದಿಗಳಿಂದ ನೀರನ್ನು ತರಲು ಸರಕಾರ ಹರಸಾಹಸ ಪಡುತ್ತಿರುವುದು ಒಂದೆಡೆಯಾದರೆ, ಬೆಂಗಳೂರಿನಲ್ಲಿ ಮಳೆ ಬೀಳುವುದೇ ದೊಡ್ಡ ಸಮಸ್ಯೆ ಎಂಬಂತಹ ಪರಿಸ್ಥಿತಿ ಮತ್ತೊಂದೆಡೆ ಎದ್ದುಕಾಣುತ್ತಿದೆ. ಈ ಸಂದಿಗ್ಧತೆಗೆ ಬಿಬಿಎಂಪಿಯ ಬೇಜವಾಬ್ದಾರಿತನ ಮತ್ತು ಅಸಮರ್ಥತೆಯೇ ಕಾರಣವಾಗಿದೆ ಎಂದು ಆಪಾದಿಸಿದೆ.

ಮಳೆ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಿಂದ ಬೆಂಗಳೂರಿನ ನೀರಿನ ಸಮಸ್ಯೆಯನ್ನು ನಿವಾರಿಸಬಹುದು ಎಂದು ಅನೇಕ ತಜ್ಞರು ಸಲಹೆ ನೀಡಿದ್ದಾರೆ. ಆದರೆ ಇದಕ್ಕೆ ಕಿವಿಗೊಡದ ಬಿಬಿಎಂಪಿ ಕಣ್ಣು ಮುಚ್ಚಿಕೊಂಡು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಸಣ್ಣ ಪ್ರಮಾಣದ ಮಳೆಯಿಂದಲೇ ಬೆಂಗಳೂರಿನ ಹಲವು ಭಾಗಗಳ ರಸ್ತೆಗಳು, ಚರಂಡಿಗಳಲ್ಲಿ ನೀರು ತುಂಬಿ ವಾಹನ ಸಂಚಾರವೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿ ಸಾವಿರಾರು ಜನರು ಪರದಾಡುವಂತಾಗುತ್ತದೆ.

ಮುಂದಿನ ದಿನಗಳಲ್ಲಿ ಸುರಿಯುವ ಮಳೆಗೆ ಬೆಂಗಳೂರು ಮತ್ತಷ್ಟು ತತ್ತರಿಸುವ ಸಾಧ್ಯತೆ ಹೆಚ್ಚಾಗಿದೆ. ಇಂತಹ ಪರಿಸ್ಥಿತಿ ಎದುರಾಗದಂತೆ ಮುನ್ನೆಚರಿಕೆ ವಹಿಸಿ ಮುಂಬರುವ ಮಳೆಯಿಂದಾಗುವ ಅನಾಹುತವನ್ನು ನಿಯಂತ್ರಿಸಲು ರಾಜಕಾಲುವೆಗಳನ್ನು ವಿಸ್ತರಿಸಲು ಹಾಗೂ ಹಾಳಾಗುತ್ತಿರುವ ರಾಜಕಾಲುವೆಗಳನ್ನು ಸರಿಪಡಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿ ಬಿಬಿಎಂಪಿಗೆ ಚಾಟಿ ಬೀಸಿದೆ. ಆದರೆ ಈ ಯಾವ ಕೆಲಸವೂ ಬಿಬಿಎಂಪಿಯಿಂದ ನಡೆದಿಲ್ಲ, ಇದಕ್ಕೆ ಬಿಬಿಎಂಪಿಯ ಜವಾಬ್ದಾರಿ ಹೊತ್ತಿರುವ ಮೇಯರ್ ಮತ್ತು ಆಯುಕ್ತರೇ ನೇರ ಹೊಣೆ ಎಂದು ಪಕ್ಷದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರಿ ಮಳೆ ಬಂದರೆ ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಕ್ಷಣವೇ ಬಿಬಿಎಂಪಿಯು ಯೋಜನೆಯೊಂದನ್ನು ರೂಪಿಸಿ ಕಾರ್ಯನಿರತವಾಗಬೇಕು. ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಕ್ಷಿಪ್ರ-ಕಾರ್ಯಪಡೆ, ಮಳೆ ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ಅಗತ್ಯ ಮತ್ತು ಅವಶ್ಯಕ ಸಲಕರಣೆಗಳು ಮತ್ತು ನುರಿತ ಸಿಬ್ಬಂದಿಗಳ ವ್ಯವಸ್ಥೆಯನ್ನು ಮಾಡಬೇಕು. ತುರ್ತು ಸಂದರ್ಭಗಳಲ್ಲಿ ತಕ್ಷಣವೇ ಸ್ಪಂದಿಸಲು ಶಾಶ್ವತ ಸಹಾಯವಾಣಿ ಸ್ಥಾಪನೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News